Sports News: ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಜನರು ಪ್ರಾಣ ಕಳೆದುಕೊಂಡ ಬೆನ್ನಲ್ಲೆ ದೇಶದ ನಾನಾ ಕ್ಷೇತ್ರಗಳ ಗಣ್ಯರು, ದಿಗ್ಗಜರು ಘಟನೆಗೆ ಸಂತಾಪ ಸೂಚಿಸಿದ್ದಾರೆ.
ಭೀಕರ ದುರಂತಕ್ಕೆ ಸಂತಾಪ ಸೂಚಿಸಿದ ರಾಷ್ಟ್ರದ ಗಣ್ಯರು..
ಮತ್ತೊಂದೆಡೆ 17 ವರ್ಷಗಳ ಬಳಿಕ ಚಾಂಪಿಯನ್ ಆದ ಆರ್ಸಿಬಿ ತಂಡ ಬೆಂಗಳೂರಿನಲ್ಲಿ ಫ್ಯಾನ್ಸ್ಗಳಿಗಾಗಿ ವಿಜಯೋತ್ಸವ ಸಂಭ್ರಮಾಚರಣೆ ಆಯೋಜನೆ ಮಾಡಿತ್ತು. ಆದರೆ ನಿರೀಕ್ಷೆಗೂ ಮೀರಿ ಫ್ಯಾನ್ಸ್ ಆಗಮಿಸಿದ್ದರಿಂದ ಭಾರೀ ಕಾಲ್ತುಳಿತ ಸಂಭವಿಸಿತ್ತು. ಇದರ ಪರಿಣಾಮವಾಗಿ 11 ಜನರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಅಲ್ಲದೆ 47 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ದೇಶದೆಲ್ಲೆಡೆ ದುಃಖ ಆವರಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಘಟನೆಗೆ ಕಂಬನಿ ಮಿಡಿದಿದ್ದಾರೆ.
ಕಾಲ್ತುಳಿತ ಘಟನೆಯ ಸುದ್ದಿಯಿಂದ ತೀವ್ರ ಆಘಾತವಾಗಿದೆ..!
ಅಲ್ಲದೆ ಇದೀಗ ಈ ಘಟನೆಯ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿಯೂ ಸಂತಾಪ ಸೂಚಿಸಿದೆ. ಇನ್ನೊಂದೆಡೆ, ವಿರಾಟ್ ಕೊಹ್ಲಿ ಘಟನೆಯ ಕುರಿತು ಪ್ರತಿಕ್ರಿಯಿಸಿ ಭಾವುಕರಾಗಿದ್ದಾರೆ. ಕಾಲ್ತುಳಿತ ಘಟನೆಯ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಗಿದೆ. ಮೃತರ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ. ನಮ್ಮ ಎಲ್ಲಾ ಅಭಿಮಾನಿಗಳಿಗೂ ವಿನಂತಿ ಮಾಡಿಕೊಳ್ಳುತ್ತೇನೆ, ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಈ ಘಟನೆಯ ಬಗ್ಗೆ ನಮಗೆ ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆ..
ಇನ್ನೂ ಸ್ಥಳದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಈ ಘಟನೆ ಸಂಭವಿಸಿದೆ. ಪ್ರತಿಯೊಬ್ಬರ ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ವಿಷಯ ತಿಳಿದ ತಕ್ಷಣ ನಾವು ನಮ್ಮ ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆವು. ಮೃತರ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಜೊತೆಗ ಸ್ಥಳೀಯ ಅಧಿಕಾರಿಗಳಿಗೆ ನಮ್ಮ ಸಂಪೂರ್ಣ ಸಹಕಾರವನ್ನು ನೀಡಿದ್ದೇವೆ. ಈ ಸಂದರ್ಭದಲ್ಲಿ ನಮ್ಮನ್ನು ಬೆಂಬಲಿಸುವವರಿಗೆ ನಾವು ಒಂದು ಮನವಿ ಮಾಡುತ್ತೇವೆ. ಎಲ್ಲರೂ ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ಘಟನೆಯಲ್ಲಿ ಮೃತರಾದವರಿಗೆ ನನ್ನ ಸಂತಾಪಗಳು..
ಇನ್ನೂ ಈ ಘಟನೆಯಲ್ಲಿ ಮೃತರಾದವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ನನ್ನ ಪ್ರಾರ್ಥನೆಗಳು ಗಾಯಾಗಳುಗಳ ಜೊತೆಗೆ ಇರುತ್ತವೆ ಎಂದು ಆರ್ಸಿಬಿಯ ಮಾಜಿ ಆಟಗಾರ ಎ.ಬಿ. ಡಿವಿಲಿಯರ್ಸ್ ಘಟನೆಗೆ ಶೋಕ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2025ರ ಆವೃತ್ತಿಯಲ್ಲಿ ಫೈನಲ್ನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ತಂಡ 6 ರನ್ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ಬೆನ್ನಲ್ಲೇ ದೇಶದಾದ್ಯಂತ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಈ ವಿಜಯೋತ್ಸವಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಇದೀಗ ಕಣ್ಣೀರು ಸುರಿಸುವಂತಾಗಿದೆ.