ಶಂಭೋ ಎಂದರೆ ಕರುಣಿಸುವ ಶಿವ, ತನ್ನ ಭಕ್ತರು ಕೇಳಿದ ವರವನ್ನು ನೀಡುತ್ತಾನೆಂಬ ನಂಬಿಕೆ ಇದೆ. ಅದು ಯಾವ ಭಕ್ತರೇ ಆಗಲಿ, ಅವರು ದೇವತೆಗಳೇ ಆಗಲಿ, ಮನುಷ್ಯರೇ ಆಗಲಿ, ಅಥವಾ ರಾಕ್ಷಸರೇ ಆಗಲಿ, ಯಾರು ವರ ಬೇಡಿದರು ನೀಡುತ್ತಾನೆ. ಆದ್ರೆ ಶಿವನಿಗೆ ಎಷ್ಟು ಕರುಣೆ ಇದೆಯೋ, ಅದಕ್ಕಿಂತ ದುಪ್ಪಟ್ಟು ಕ್ರೋಧವಿದೆ. ಆತ ಕ್ರೋಧಿತನಾದರೆ, ಕಠೋರಾತಿ ಕಠೋರ ಶಿಕ್ಷೆ ನೀಡುತ್ತಾನೆಂಬುದು ಕೂಡ ಸತ್ಯ. ಹೀಗೆ ಶಿವನ ಕ್ರೋಧಕ್ಕೆ ಒಳಗಾಗಿ ನಾಶವಾದ ರಾಕ್ಷಸನ ಬಗ್ಗೆ ತಿಳಿಯೋಣ ಬನ್ನಿ..
ಗಜಾಸುರನೆಂಬ ರಾಕ್ಷಸನಿದ್ದ. ಈತ ಮಹಿಷಾಸುರನ ಪುತ್ರನಾಗಿದ್ದ. ಒಮ್ಮೆ ಗಜಾಸುರ, ಶಿವನಿಗಾಗಿ ಹೋಮ ಮಾಡುತ್ತಿದ್ದ ಋಷಿಗಳ ಮೇಲೆ ದೌರ್ಜನ್ಯವೆಸಗಿ, ಅವರ ಹೋಮವನ್ನು ಹಾಳು ಮಾಡುತ್ತಾನೆ. ಆಗ ಆ ಋಷಿಗಳು ನಾರದನನ್ನು ನೆನೆದು, ತಮ್ಮನ್ನು ರಕ್ಷಿಸುವಂತೆ ಕೇಳುತ್ತಾರೆ. ಆಗ ನಾರದ ಶಿವನ ಬಳಿ ಹೋಗಿ, ನಿಮಗಾಗಿ ತಪಸ್ಸು ಮಾಡುತ್ತಿದ್ದ ಋಷಿಗಳ ತಪಸ್ಸನ್ನು ಗಜಾಸುರ ನಾಶ ಮಾಡಿದ್ದಾರೆ. ಅವನಿಗೆ ನೀವೇ ಬುದ್ಧಿ ಕಲಿಸಿ ಎಂದು ಕೇಳುತ್ತಾನೆ.
ಆಗ ಶಿವ ಗಾಜಸುರನಿಗೆ ಪಾತಾಳಕ್ಕೆ ಹೋಗಲು ಆಗ್ರಹಿಸುತ್ತಾನೆ. ಆದ್ರೆ ಗಜಾಸುರ, ಶಿವನಿಗೆ ಹಂಗಿಸಿ ಮಾತನಾಡುತ್ತಾನೆ. ನೀನು ನನ್ನನ್ನು ಏನೂ ಮಾಡುವ ಹಾಗಿಲ್ಲ. ನಾನು ರಾಕ್ಷಸ ಕುಲದವನು ಮತ್ತು ರಾಕ್ಷಸರು ನಿನ್ನ ಆರಾಧಕರು. ಹಾಗಾಗಿ ನೀನು ನನಗೆ ಶಿಕ್ಷೆ ನೀಡುವಂತಿಲ್ಲ. ನಾನು ಪಾತಾಳಕ್ಕೆ ಹೋಗಲು ಭೂಲೋಕಕ್ಕೆ ಬಂದಿಲ್ಲ. ನಾನು ಭೂಲೋಕ ಮತ್ತು ದೇವಲೋಕದಲ್ಲಿ ರಾಕ್ಷಸ ಪತಾಕೆಯನ್ನು ಹಾರಿಸಿಯೇ ಹೋಗುವೆ ಎಂದು ಸೊಕ್ಕಿನ ಮಾತನ್ನಾಡುತ್ತಾನೆ.
ಅಲ್ಲದೇ ಶಿವನ ಮೇಲೆ ಪ್ರಹಾರ ಮಾಡಲು ಬರುತ್ತಾನೆ. ಇದಕ್ಕೆ ಕ್ರೋಧಿತನಾದ ಶಿವ, ಗಜಾಸುರನ ಮೇಲೆ ಬಲ ಪ್ರಯೋಗ ಮಾಡುತ್ತಾನೆ. ಇಬ್ಬರ ನಡೆುವೆಯೂ ಯುದ್ಧ ನಡೆಯುತ್ತದೆ. ಕೊನೆಗೆ ಶರಣಾದ ಗಜಾಸುರ, ನಾನು ಪಾತಾಳ ಲೋಕದಲ್ಲಿ ಇದ್ದೆ. ಆದ್ರೆ ನಿಮಗಾಗಿಯೇ ನಾನು ಭೂಲೋಕಕ್ಕೆ ಬಂದೆ. ನಿಮ್ಮಿಂದಲೇ ನನ್ನ ಜೀವ ಹೋಗುತ್ತಿರುವುದು ಉತ್ತಮ ವಿಷಯ ಎನ್ನುತ್ತಾನೆ.
ಆಗ ಶಿವ ನಿನ್ನ ಮನಸ್ಸಿನಲ್ಲಿ ನನ್ನ ಕುರಿತು ತಪಸ್ಸು ಮಾಡುವ ಇಚ್ಛೆ ಹುಟ್ಟಿಸಿದ್ದು ನಾನೇ. ಈ ಭೂಲೋಕಕ್ಕೆ ನಿನ್ನನ್ನು ಕರೆಸಿಕೊಂಡಿದ್ದು ನಾನೇ. ನಿನ್ನ ಮನಸ್ಸಿನಲ್ಲಿ ಈ ರೀತಿ ಅಹಂ ಬರುವ ಹಾಗೆ ಮಾಡಿದ್ದೂ ನಾನೇ. ಇದೆಲ್ಲವೂ ನನ್ನ ಲೀಲೆಯ ಒಂದು ಭಾಗ. ನಿನ್ನ ಕೊನೆಯ ಆಸೆಯೇನು ಎಂದು ಕೇಳಿದ.
ಆಗ ಗಜಾಸುರ, ನೀವು ಕೃತ್ತಿವಾಸ ಎಂಬ ನನ್ನ ಹೆಸರನ್ನು ಇಟ್ಟುಕೊಳ್ಳಬೇಕು. ನನ್ನ ಚರ್ಮದಲ್ಲಿ ಕೆಲವು ಭಾಗವನ್ನು ನೀವು ನಿಮ್ಮ ದೇಹಕ್ಕೆ ಸುತ್ತಿಕೊಳ್ಳಬೇಕು ಎನ್ನುತ್ತಾನೆ. ಹೀಗೆ ಗಜಾಸುರನ ಚರ್ಮದ ಭಾಗವನ್ನು ಸುತ್ತಿಕೊಂಡ ಶಿವನ ಅವತಾರಕ್ಕೆ ಕೃತ್ತಿವಾಸ ಎಂದು ಕರೆಯಲಾಗುತ್ತದೆ.