ಮಹಾಭಾರತದಲ್ಲಿ ಇವರನ್ನು ಮೋಸದಿಂದ ಕೊಲ್ಲದೇ ಬೇರೆ ಉಪಾಯವಿರಲಿಲ್ಲ- ಭಾಗ 1

ಮಹಾಭಾರತ ಯುದ್ಧದಲ್ಲಿ ಹಲವಾರು ಜನ ಮರಣ ಹೊಂದಿದರು. ಇದರಲ್ಲಿ ಕೆಲವು ಶೂರರನ್ನು ಮೋಸದಿಂದ ಕೊಲ್ಲಲಾಯಿತು. ಹೀಗೆ ಕೊಂದಿದ್ದಕ್ಕೆ, ಪಾಂಡವರು ಗೆಲ್ಲುವಂತಾಯಿತು. ಹಾಗಾದ್ರೆ, ಯಾರ್ಯಾರನ್ನು ಮೋಸದಿಂದ ಕೊಲ್ಲಲಾಯಿತು, ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಭೀಷ್ಮ ಪಿತಾಮಹ: ಭೀಷ್ಮರು ಮಹಾಭಾರತದ ಅನುಭವಿ ಹಿರಿಯರು. ಶೂರ ವೀರನಾಗಿದ್ದ ಭೀಷ್ಮನಿಗೆ ಇಚ್ಛಾಮರಣದ ವರವಿತ್ತು. ಹಾಗಾಗಿ ಇವರಿಗೆ ಅಷ್ಟು ಸುಲಭವಾಗಿ ಸಾವು ಬರಲು ಸಾಧ್ಯವಿಲ್ಲ ಅನ್ನೋದು ಪಾಂಡವರಿಗೆ ಗೊತ್ತಿತ್ತು. ಹಾಗಾಗಿ ಭೀಷ್ಮನನ್ನು ಕೊಲ್ಲಲು ಶಿಖಂಡಿಯ ಸಹಾಯ ಪಡೆಯಬೇಕಾಯಿತು. ಯಾಕಂದ್ರೆ ಶಿಖಂಡಿ ಕಳೆದ ಜನ್ಮದಲ್ಲಿ ಹೆಣ್ಣಾಗಿದ್ದ, ಮತ್ತು ಭೀಷ್ಮರು ತಾವು ಯಾವ ಹೆಣ್ಣಿನ ಮೇಲೂ ಬಾಣ ಚಲಾಯಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಇದೇ ಕಾರಣಕ್ಕೆ, ಅರ್ಜುನ ಭೀಷ್ಮರನ್ನು ಬಾಣಗಳ ಶಯ್ಯದ ಮೇಲೆ ಮಲಗಿಸಿಬಿಟ್ಟ. ನಂತರ ಭೀಷ್ಮ ಪಿತಾಮಹರು, ಉತ್ತರಾಯಣ ಕಾಲದಲ್ಲಿ ಮರಣ ಹೊಂದಿದರು.

ದ್ರೋಣಾಚಾರ್ಯರು: ಪಾಂಡವರು ಮತ್ತು ಕೌರವರಿಗೆ ಯುದ್ಧ ತಂತ್ರವನ್ನು ಹೇಳಿಕೊಟ್ಟವರೇ ದ್ರೋಣಾಚಾರ್ಯರು. ಅಂಥ ಶಕ್ತಿಶಾಲಿ ಗುರುಗಳಾದ ದ್ರೋಣರು, ಕೌರವ ಸೇನೆಯಲ್ಲಿದ್ದರು. ಇವರನ್ನು ಕೊಲ್ಲದಿದ್ದಲ್ಲಿ, ನಾವು ಗೆಲ್ಲುವುದು ಅಸಾಧ್ಯವೆಂದು ಪಾಂಡವರಿಗೆ ಗೊತ್ತಿತ್ತು. ಹಾಗಾಗಿ ಕೃಷ್ಣನ ಸಹಾಯ ಪಡೆದರು. ದ್ರೋಣರ ಮಗ ಅಶ್ವತ್ಥಾಮ ಚಿರಂಜೀವಿಯಾಗಿದ್ದ. ಆದ್ರೆ ಭೀಮ ಅಶ್ವತ್ಥಾಮನೆಂಬ ಆನೆಯ ವಧೆ ಮಾಡಿದ. ಇದನ್ನೇ ಅಸ್ತ್ರವಾಗಿ ಬಳಸಿದ ಯುಧಿಷ್ಠಿರ ಅಶ್ವತ್ಥಾಮ ಹತಃ ಕುಂಜರ ಎಂದ.

ಕುಂಜರ ಎಂದರೆ ಆನೆ ಎಂದರ್ಥ. ಆದ್ರೆ ಕುಂಜರ ಎಂಬ ಪದ ಬಳಕೆಯಾದಾಗ, ಕೃಷ್ಣ ಪಾಂಚಜನ್ಯ ಊದಿ, ಕುಂಜರ ಎನ್ನುವ ಪದ ದ್ರೋಣರಿಗೆ ಕೇಳದಂತೆ ಮಾಡಿಬಿಟ್ಟ. ಆಗ ದ್ರೋಣರು ಅದು ಹೇಗೆ ನನ್ನ ಮಗ ಸತ್ತ, ಅವನು ಚಿರಂಜೀವಿಯಲ್ಲವೇ ಎಂದು ಯೋಚಿಸಿ, ಸ್ವರ್ಗಕ್ಕೆ ಹೋಗಿ, ಮಗನನ್ನು ಕರೆತರಲು ನಿರ್ಧರಿಸಿದರು. ದೇಹವನ್ನು ಬಿಟ್ಟು, ಆತ್ಮದೊಂದಿಗೆ ಸ್ವರ್ಗಕ್ಕೆ ಹೋದರು. ಅದೇ ವೇಳೆಗೆ ದೃಷ್ಟದ್ಯುಮ್ನ, ದ್ರೋಣರ ದೇಹಕ್ಕೆ ಬಾಣ ಬಿಟ್ಟನು. ದ್ರೋಣರು ಸಂಗತಿ ತಿಳಿದು, ಆತ್ಮದೊಂದಿಗೆ ಬರುವಷ್ಟರಲ್ಲಿ, ದ್ರೋಣರ ದೇಹ ಚಿಧ್ರವಾಗಿತ್ತು.

ಅಭಿಮನ್ಯು: ಅರ್ಜುನನ ಮಗ ಅಭಿಮನ್ಯು, ಕೌರವರು ರಚಿಸಿದ ಚಕ್ರವ್ಯೂಹದಲ್ಲಿ ಸಿಲುಕಿ, ಅದರಿಂದ ಬರಲಾಗದೇ ಉಳಿದ. ಈ ಸಮಯವನ್ನು ನೋಡಿದ ಕೌರವರು, ಅಭಿಮನ್ಯುವನ್ನು ಕೊಂದರು. ಯುದ್ಧಕ್ರಮದ ಪ್ರಕಾರ, ಯುದ್ಧ ನಡೆಯುವಾಗ ಇಬ್ಬರೇ ಇರಬೇಕು. ಆ ಜಗಳದಲ್ಲಿ ಮೂರನೆಯವರು ಬರಬಾರದು ಅನ್ನೋ ನಿಯಮವಿತ್ತು. ಆದರೆ ಅಭಿಮನ್ಯು ಒಬ್ಬನೇ ಇರುವಾಗ, ಕರ್ಣ, ದುರ್ಯೋಧನ, ಶಕುನಿ ಎಲ್ಲರೂ ಬಂದು, ಅಭಿಮನ್ಯುವನ್ನ ಕಪಟದಿಂದ ಕೊಂದರು.

ಇನ್ನುಳಿದ ವಿಷಯವನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

About The Author