ಇಡೀ ವಿಶ್ವದಲ್ಲಿಗ ಚರ್ಚೆಯಾಗ್ತಿರೋ ಸುದ್ದಿ ಅಂದ್ರೆ ಗಗನಯಾತ್ರಿಗಳದ್ದು.. ಅದ್ರಲ್ಲೂ ಸುನೀತಾ ವಿಲಿಯನ್ಸ್ ಅವರು ಹೆಚ್ಚು ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುನೀತಾ ಅವರನ್ನ ಕೋಟ್ಯಂತರ ಜನ ಹುಡುಕುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೊದಂತಾ ಸುನೀತಾ ಇನ್ನೂ ವಾಪಾಸ್ ಬಂದಿಲ್ಲ. ಅವರ ವಾಪಾಸಾತಿಯನ್ನು ಜೂನ್ 26ಕ್ಕೆ ಮುಂದೂಡಲಾಗಿತ್ತು. ಇಲ್ಲಿಯವರೆಗೆ ತಾಂತ್ರಿಕ ತೊಂದರೆಗಳನ್ನು ಸರಿಮಾಡೋದಕ್ಕೆ ಆಗೇ ಇಲ್ವಾ? ಹಾಗಾದರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ಅವರು ಸಿಕ್ಕಿಹಾಕಿಕೊಂಡ್ರಾ? ಕಲ್ಪನಾ ಚಾವ್ಲಾ ವಿಚಾರದಲ್ಲಿ ಆದಂತಾ ದುರ್ಘಟನೆ ಮತ್ತೆ ಮರುಕಳಿಸುತ್ತಾ? ಸುನೀತಾ ಮತ್ತು ಅವರ ತಂಡ ಅಲ್ಲಿ ಈಗ ಏನು ಮಾಡುತ್ತಿದೆ?
ಇದೇ ಜೂ. 5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದೆ. ಐಎಸ್ಎಸ್ನಿಂದ ಭೂಮಿಗೆ ಹಿಂದಿರುಗಬೇಕಿದ್ದ ಅವರ ವಾಹನದಲ್ಲಿ ಹಲವಾರು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ನಿಗದಿತ ವೇಳಾಪಟ್ಟಿಯಂತೆ ಸುನೀತಾ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ಸಾಗಬೇಕಿತ್ತು. ಆದರೆ, ತಾಂತ್ರಿಕ ದೋಷ ಕಾರಣದಿಂದಾಗಿ ಅವರು ಅಲ್ಲೇ ಉಳಿಯುವಂತಾಗಿದೆ. ಈ ಹಿಂದೆ 2003ರಲ್ಲಿ ಭಾರತ ಮೂಲದ ಕಲ್ಪನಾ ಚಾವ್ಲಾ ಅವರಂತೆಯೇ ಸುನಿತಾ ವಿಲಿಯಮ್ಸ್ ಅವರೂ ಭೂಮಿಗೆ ಹಿಂದಿರುಗಲಾಗಂತಹ ಪರಿಸ್ಥಿತಿ ಸುನೀತಾ ವಿಲಿಯಮ್ಸ್ ಅವರಿಗೂ ಬರಲಿದೆಯೇ ಎಂಬ ಆತಂಕವೂ ಎದುರಾಗಿದೆ.
ಕಲ್ಪನಾ ಚಾವ್ಲಾ ಯಾರು? ಅವರ ಹಿನ್ನಲೆಯ ಕುರಿತು ನೋಡುವುದಾದ್ರೆ…
ಕಲ್ಪನಾ ಚಾವ್ಲಾ ಅವರು ಭಾರತದ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ 17 ಮಾರ್ಚ್ 1962 ರಂದು ಜನಿಸಿದ್ರು. ಅವರು ತಮ್ಮ ತಂದೆ ಬನ್ಸಾರಿ ಲಾಲ್ ಮತ್ತು ತಾಯಿ ಸಂಯೋಗಿತಾ ಅವರ ನಾಲ್ಕನೇ ಮಗು. ಅವರನ್ನು ಪ್ರೀತಿಯಿಂದ ಮಾಂಟೋ ಎಂದು ಕರೆಯುತ್ತಿದ್ರು. ಆದರೆ ಶಾಲೆಗೆ ಸೇರಬೇಕಾದಾಗ ಶಾಲೆಯ ಮುಖ್ಯೋಪಾಧ್ಯಾಯರು ಹೆಸರನ್ನು ಆಯ್ಕೆ ಮಾಡಲು ಕೇಳಿದ್ರು. ಆಗ ಅವರಿಗೆ ಮಾಂಟೋ ಬದಲು ಕಲ್ಪನಾ ಎಂದು ಹೆಸರು ಮರುನಾಮಕರಣ ಮಾಡಲಾಯಿತು. ಕಲ್ಪನಾ ಅವರು ಬಾಲ್ಯದಿಂದಲೂ ಕವನ ಬರೆಯುವುದು, ನೃತ್ಯ, ಸೈಕ್ಲಿಂಗ್ ಮತ್ತು ರನ್ನಿಂಗ್ ಮಾಡೋದನ್ನು ತುಂಬಾ ಇಷ್ಟಪಡುತ್ತಿದ್ರು. ಬೆಳದಿಂಗಳ ರಾತ್ರಿಯಲ್ಲಿ ಬೈಕ್ ಓಡಿಸುವುದನ್ನು ತುಂಬಾನೇ ಇಷ್ಟಪಡುತ್ತಿದ್ರಂತೆ.
ಕಲ್ಪನಾ ಚಾವ್ಲಾಗೆ ಬಾಲ್ಯದಿಂದಲೂ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಮುಗಿಸಿದ ಬಳಿಕ, 1982 ರಲ್ಲಿ ಅಮೇರಿಕಾಕ್ಕೆ ಹೋದರು. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, 1986 ರಲ್ಲಿ ಎರಡನೇ ಸ್ನಾತಕೋತ್ತರ ಪದವಿ ಮತ್ತು 1988 ರಲ್ಲಿ ಪಿಎಚ್‍ಡಿ ಪಡೆದರು.
ಕಲ್ಪನಾ ಅವರಿಗೆ ಹಾರಾಟದ ಬಗ್ಗೆ ಅಪಾರ ಒಲವು ಇತ್ತು. ನಾಸಾಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದಾಗ, ಅವರು ಆಯ್ಕೆಯಾಗಲಿಲ್ಲ. ತನ್ನ ಎರಡನೇ ಪ್ರಯತ್ನದಲ್ಲಿ 23 ಅಭ್ಯರ್ಥಿಗಳ ಪೈಕಿ ತಾವು ಕೂಡ ಆಯ್ಕೆಯಾದ್ರು.. ಮಾರ್ಚ್ 1995 ರಲ್ಲಿ ನಾಸಾ ಅವರನ್ನು ತನ್ನ ಗಗನಯಾತ್ರಿ ಕ್ಯಾಂಪ್ಸ್ ತಂಡದಲ್ಲಿ ಸೇರಿಸಿಕೊಂಡಿತು. 1997ರಲ್ಲಿ ಮೊದಲ ಬಾಹ್ಯಾಕಾಶ ಹಾರಾಟ ನಡೆಸಿದ್ರು. 1997ರ ನವೆಂಬರ್ 19ರಿಂದ 1997ರ ಡಿಸೆಂಬರ್ 5ರವರೆಗಿನ ಮೊದಲ ಬಾಹ್ಯಾಕಾಶ ಯಾತ್ರೆಗೆ ಆಯ್ಕೆಯಾಗಿದ್ರು. ದುರದೃಷ್ಟ ಅನ್ನಿಸುತ್ತೆ.. 2003ರ ಫೆಬ್ರವರಿ 1 ರಂದು ಕೊಲಂಬಿಯಾ ಶಟಲ್ ದುರಂತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಮಹಿಳಾ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾ ದುರಂತ ಅಂತ್ಯ ಕಂಡಿದ್ದು, ಭಾರತೀಯರನ್ನು ಘಾಸಿಗೊಳಿಸಿತ್ತು.
ಇನ್ನು ಸುನಿತಾ ವಿಲಿಯಮ್ಸ್ ವಿಚಾರಕ್ಕೆ ಬರುವುದಾದರೆ.. ಅವರು ಜೂ. 14ರಂದೇ ಹಿಂದಿರುಗಬೇಕಿತ್ತು!
ಹೌದು.. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಅವರು, ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂ. 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ರು. ಪೂರ್ವ ಯೋಜನೆಯಂತೆ ಅವರು ಜೂ. 14ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದರೆ, ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರ ವಾಪಸಾತಿಯನ್ನು ಜೂ. 26ಕ್ಕೆ ಮುಂದೂಡಲಾಗಿತ್ತು. ಆದರೆ, ತಾಂತ್ರಿಕ ದೋಷಗಳು ಸರಿಹೋಗದ ಕಾರಣ, ಅದರ ಜೊತೆಯಲ್ಲೇ ಮತ್ತಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣದಿಂದಾಗಿ, ಈಗ ಪುನಃ ವಾಪಸ್ಸಾತಿ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಇದು ಆತಂಕವನ್ನು ಹೆಚ್ಚಿಸಲು ಮತ್ತೊಂದು ಕಾರಣವಾಗಿದೆ.
ಇನ್ನು ಸುನಿತಾ ವಿಲಿಯಮ್ಸ್ಗೆ ಇದು ಮೂರನೇ ಬಾಹ್ಯಾಕಾಶ ಪಯಣವಾಗಿದೆ. ಈ ಹಿಂದೆ ಅವರು, ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಅಲ್ಲಿ ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗನನ ಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದುವರೆಗೆ ಸುನಿತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಒಟ್ಟು 50 ಗಂಟೆ 40 ನಿಮಿಷ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ನಿಜವಾದ ಆತಂಕವೇನು ಅಂದ್ರೆ ಸುನಿತಾ ಹಾಗೂ ವಿಲ್ಮರ್ ಅವರನ್ನು ಭೂಮಿಗೆ ವಾಪಸ್ ಕರೆತರುವ ಸ್ಟಾರ್ ಲೈನರ್ ಆಕಾಶಕಾಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ನಿಜವಷ್ಟೇ. ತಾಂತ್ರಿಕ ದೋಷಗಳನ್ನು ಬೇಗನೇ ಸರಿಪಡಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಅಸಲಿಗೆ, ಅದರಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ, ತಾಂತ್ರಿಕ ದೋಷ ಬೇಗನೇ ನಿವಾರಣೆಯಾಗದಿದ್ರೆ ಇಂಧನ ಖಾಲಿಯಾಗುತ್ತಾ ಹೋಗುತ್ತದೆ. ತಾಂತ್ರಿಕ ದೋಷಗಳು ನಿವಾರಣೆಯಾಗುವ ಹೊತ್ತಿಗೆ ಇಂಧನ ಖಾಲಿಯಾದರೆ ಅವರು ಭೂಮಿಗೆ ಹಿಂದಿರುಗಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಐಎಸ್ಎಸ್ಗೆ ಸುನೀತಾ ಹೋಗಿದ್ಯಾಕೆ ಅಂತಾ ನೋಡೋದಾದ್ರೆ ನಾಸಾ ಹಾಗೂ ಬೋಯಿಂಗ್ನ ಜಂಟಿ ಸಹಯೋಗದಲ್ಲಿ ಖಾಸಗಿಯಾಗಿ ಬಾಹ್ಯಾಕಾಶ ಪ್ರಯಾಣ ಮಾಡುವ ಆಸಕ್ತಿಯುಳ್ಳವರಿಗಾಗಿ ಹೊಸ ಕಾರ್ಯಕ್ರಮವನ್ನು ರೂಪಿಸಿದೆ. ಸಾಮಾನ್ಯವಾಗಿ ಟ್ರಿಪ್ ಹೋದಂತೆ ಬಾಹ್ಯಾಕಾಶಕ್ಕೆ ಟ್ರಿಪ್ ಹೋಗಿ, ಅಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಕೆಲ ದಿನಗಳವರೆಗೆ ಉಳಿದುಕೊಂಡು ಅಲ್ಲಿಂದ ಪುನಃ ಭೂಮಿಗೆ ಹಿಂದಿರುಗುವ ರೋಮಾಂಚನವನ್ನು ಖಗೋಳಾಸಕ್ತರಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿಯೇ ಬೋಯಿಂಗ್ ಸಂಸ್ಥೆ ಸ್ಟಾರ್ ಲೈನರ್ ಎಂಬ ಆಕಾಶಕಾಯವೊಂದನ್ನು ಪ್ರಯೋಗಿಕವಾಗಿ ಸಿದ್ಧಪಡಿಸಿದೆ.
ಬಾಹ್ಯಾಕಾಶಕ್ಕೆ ಮನುಷ್ಯರನ್ನು ಈ ಹಿಂದೆಯೂ ಕಳಿಸಲಾಗಿದೆ ಹಾಗೂ ಅವರನ್ನು ಪುನಃ ವಾಪಸ್ ಕರೆಯಿಸಿಕೊಳ್ಳಲಾಗಿದೆ. ಆದರೆ, ಅದೆಲ್ಲವೂ ರಾಕೆಟ್ನ ಮೂಲಕ ಮಾಡಲಾಗುತ್ತಿದ್ದ ಕೆಲಸಗಳು. ಅಲ್ಲದೆ, ಬೆರಳೆಣಿಕೆಯಷ್ಟು ವ್ಯಕ್ತಿಗಳನ್ನು ಕಳುಹಿಸಲಾಗಿದ್ದ ಪ್ರಾಜೆಕ್ಟ್ಗಳು. ಸ್ಟಾರ್ ಲೈನ್ ಆಕಾಶಕಾಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ತಾಂತ್ರಿಕ ದೋಷಗಳ ಬಗ್ಗೆ ಸುನಿತಾ ವಿಲಿಯಮ್ಸ್ ಹಾಗೂ ಅವರೊಂದಿಗಿರುವ ವಿಲ್ಮರ್ ಅವರಿಗೆ ತಿಳಿಸಲಾಗಿತ್ತದೆ. ಅಷ್ಟೇ ಅಲ್ಲದೆ, ನಾಸಾ ಹಾಗೂ ಬೋಯಿಂಗ್ನ ನೂರಾರು ತಂತ್ರಜ್ಞರು ಹಾಗೂ ಸ್ಟಾರ್ ಲೈನ್ ಆಕಾಶಕಾಯ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಬೋಯಿಂಗ್ ವಿಶೇಷ ಪರಿಣಿತರ ತಂಡ, ಭೂಮಿಯಿಂದಲೇ ನೇರವಾಗಿ ಅವರೊಂದಿಗೆ ನೇರ ಸಂಪರ್ಕದ ಮೂಲಕ ಅವರಿಗೆ ಅಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ನಿವಾರಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡುತ್ತಿದೆ.
ದೂರಸಂವೇದಿ ಅಂದರೆ ರಿಮೋಟ್‍ನ ಮೂಲಕ ಮಾಡುವಂತಹ ರಿಪೇರಿಗಳನ್ನು ಭೂಮಿಯಿಂದಲೇ ಕೈಗೊಳ್ಳಲಾಗಿದೆ. ಆದರೆ, ಒಂದು ದೋಷವನ್ನು ಸರಿಪಡಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಸುನಿತಾ ವಿಲಿಯಮ್ಸ್ ಭೂಮಿಗೆ ಮರಳುವುದು ಕಷ್ಟವಾಗಿದೆ.