ನವದೆಹಲಿ: ತಮ್ಮ ರಾಜೀನಾಮೆ ಕುರಿತಾಗಿ ವಿಧಾನಸಭಾ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆಂದು ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ಇಂದು ಬೆಳಗ್ಗಿನಿಂದಲೂ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ, ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ-ಪ್ರತಿವಾದ ಆಲಿಸಿತು. ಸುದೀರ್ಘ ಮೂರೂವರೆ ತಾಸುಗಳ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಹೀಗಾಗಿ ಇಂದು ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಲೀ, ಅನರ್ಹತೆ ಕುರಿತಾದ ನಿರ್ಧಾರವಾಗಲಿ ಕೈಗೊಳ್ಳೋದಕ್ಕೆ ಸಾಧ್ಯವಿಲ್ಲ. ಇನ್ನು ಇಂದು ಅತೃಪ್ತರಿಂದ ಎದುರಾಗಿದ್ದ ಇಬ್ಬಂದಿಗೆ ತೆರೆ ಬಿದ್ದು ಗುರುವಾರದ ವಿಶ್ವಾಸಮತ ಯಾಚನೆ ಕುರಿತು ಸ್ಪಷ್ಟ ನಿಲುವು ತಳೆಯುವತ್ತ ಗಮನ ಹರಿಸೋಣವೆಂಬ ದೋಸ್ತಿಗಳ ಲೆಕ್ಕಾಚಾರ ತಪ್ಪಿದಂತಾಗಿದೆ. ಅಲ್ಲದೆ ವಿಶ್ವಾಸಮತ ಸಾಬೀತಿಗೆ ಇನ್ನೊಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ದೋಸ್ತಿಗಳಿಗೆ ಪ್ರತಿಯೊಂದು ನಿಮಿಷವೂ ಅತಿ ಮುಖ್ಯವಾಗಿದೆ. ಅಲ್ಲದೆ ಅತೃಪ್ತರೂ ಸಹ ನಾಳಿನ ತೀರ್ಪಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಎಲ್ಲರ ಚಿತ್ತ ನಾಳಿನ ಸುಪ್ರೀಂನ ತೀರ್ಪಿನತ್ತ ನೆಟ್ಟಿದೆ.
ಯಡಿಯೂರಪ್ಪ ಗೇಮ್ ಪ್ಲಾನ್ ಸಕ್ಸಸ್ ಆಗುತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ