ಟೆಂಪಲ್ ಸ್ಟೈಲ್ ರಸಮ್ ಎಷ್ಟು ಸ್ವಾದಿಷ್ಟಕರವಾಗಿರತ್ತೆ ಅಂತಾ ತಿಂದವರಿಗೇ ಗೊತ್ತಿರತ್ತೆ. ಇಂಥ ರಸಮ್‌ನಾ ನಾವು ಕೂಡ ಮನೆಯಲ್ಲೇ ಮಾಡ್ಬೇಕು ಅನ್ನೋದು ತುಂಬಾ ಜನರ ಆಸೆಯಾಗಿದೆ. ಹಾಗಾಗಿ ನಾವಿಂದು ಮನೆಯಲ್ಲೇ ಟೆಂಪಲ್ ಸ್ಟೈಲ್ ರಸಮ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ತೊಗರಿ ಬೇಳೆ, ಮೂರು ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ, ಚಿಕ್ಕ ತುಂಡು ಬೆಲ್ಲ ಮತ್ತು ಹುಣಸೆಹಣ್ಣು, ಚಿಟಿಕೆ ಅರಿಶಿನ, ಹೆಚ್ಚು ಖಾರ ಬೇಕಾದಲ್ಲಿ ಮತ್ತು ಕಲರ್ ಬರಲು ಖಾರದ ಪುಡಿ ಬಳಸಬಹುದು. ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಎರಡು ಸ್ಪೂನ್ ತುಪ್ಪ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಎರಡು ಒಣ ಮೇಣಸಿನಕಾಯಿ, ಚಿಟಿಕೆ ಇಂಗು.
ರಸಂ ಪೌಡರ್ ತಯಾರಿಸಲು: ಮುಕ್ಕಾಲು ಕಪ್ ಉದ್ದಿನ ಬೇಳೆ, ಅರ್ಧ ಕಪ್ ಕಡಲೆ ಬೇಳೆ, ಒಂದು ಸ್ಪೂನ್ ಮೆಂತ್ಯೆ, 10 ಒಣ ಮೆಣಸಿನಕಾಯಿ, ಒಂದು ಕಪ್ ಕೊತ್ತಂಬರಿ ಕಾಳು, ಕಾಲು ಕಪ್ ಜೀರಿಗೆ, 20 ಎಸಳು ಕರಿಬೇವು.
ಮಾಡುವ ವಿಧಾನ: ಮೊದಲು ರಸಂ ಪೌಡರ್ ತಯಾರಿಸಿಕೊಳ್ಳಿ. ಉದ್ದಿನ ಬೇಳೆ, ಕಡಲೆ ಬೇಳೆ, ಮೆಂತ್ಯೆ, ಒಣ ಮೆಣಸಿನಕಾಯಿ, ಕೊತ್ತೊಂಬರಿ ಕಾಳು, ಜೀರಿಗೆ, ಕರಿಬೇವು ಇವೆಲ್ಲವನ್ನೂ ಸಪರೇಟ್ ಸಪರೇಟ್ ಆಗಿ ಹುರಿಯಬೇಕು. ಹೀಗೆ ನೀವು ಇದನ್ನ ಹುರಿಯುವಾಗ ಅದರ ಪರಿಮಳ ಬರಬೇಕು. ಪರಿಮಳ ಬರಲು ಶುರುವಾದರೆ, ಹುರಿದಿದ್ದು ಕರೆಕ್ಟ್ ಆಗಿದೆ ಎಂದರ್ಥ. ಇನ್ನು ಇದನ್ನ ಹುರಿಯುವಾಗ ಎಣ್ಣೆ, ಬೆಣ್ಣೆ, ತುಪ್ಪ ಯಾವುದನ್ನೂ ಬಳಸಬಾರದು. ಹಾಗೆ ಹುರಿಯಬೇಕು. ಹೀಗೆ ಹುರಿದ ಸಾಮಗ್ರಿಗಳನ್ನ ಮಿಕ್ಸಿ ಜಾರ್‌ಗೆ ಹಾಕಿ, ತರಿ ತರಿಯಾಗಿ ಪುಡಿ ಮಾಡಿಕೊಂಡರೆ, ರಸಂ ಪುಡಿ ರೆಡಿ. ಇದನ್ನು ಸಾಂಬಾರ್ ಮಾಡುವಾಗಲೂ ಬಳಸಬಹುದು.
ಮೊದಲು ತೊಗರಿ ಬೇಳೆ ಬೇಯಿಸಿ. ಬೇಳೆ ಬೇಯಿಸುವಾಗ, ನೀರು ಬಿಟ್ಟು ಬೇರೆನೂ ಹಾಕುವ ಅವಶ್ಯಕತೆ ಇಲ್ಲ. ಈ ಗ್ಯಾಸ್ ಆನ್ ಮಾಡಿ ಪ್ಯಾನ್ ಇಟ್ಟು ಅದಕ್ಕೆ ಕೊಂಚ ಎಣ್ಣೆ ಹಾಕಿ ಹಸಿ ಮೆಣಸು ಮತ್ತು ಟೊಮೆಟೋ ಹಾಕಿ ಚೆನ್ನಾಗಿ ಹುರಿಯಿರಿ. ಹುರಿದ ಬಳಿಕ ಕೊಂಚ ನೀರು ಹಾಕಿ ಬೇಯಿಸಿ. ಇದಾದ ಬಳಿಕ ಬೆಲ್ಲ, ಹುಣಸೆ ಹಣ್ಣು, ಉಪ್ಪು, ಬೇಯಿಸಿದ ಬೇಳೆ ಹಾಕಿ, ಮಿಕ್ಸ್ ಮಾಡಿ. ಈಗ ಅರಿಶಿನ, ಖಾರದ ಪುಡಿ, ಎರಡು ಸ್ಪೂನ್ ರಸಂ ಪುಡಿ ಹಾಕಿ, ಚೆನ್ನಾಗಿ ಕುದಿ ಬರಿಸಿ.
ಇದಾದ ಬಳಿಕ, ಕೊತ್ತೊಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈಗ ಒಗ್ಗರಣೆ ಸೌಟಿನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸು, ಇಂಗು ಹಾಕಿ ಒಗ್ಗರಣೆ ಕೊಟ್ರೆ ಟೆಂಪಲ್ ಸ್ಟೈಲ್ ರಸಂ ರೆಡಿ.