Health: ಮನುಷ್ಯನ ಆರೋಗ್ಯ ಏರುಪೇರಾಗಲು ಕಾರಣ, ದೇಹದಲ್ಲಿ ವಾತ, ಪಿತ್ತ, ಮತ್ತು ಕಫದ ಪ್ರಮಾಣ ಏರುಪೇರಾಗುವುದು. ಕಫ ಹೆಚ್ಚಾದಾಗ ಒಂದು ಆರೋಗ್ಯ ಸಮಸ್ಯೆ, ಪಿತ್ತ ಹೆಚ್ಚಾದಾಗ ಇನ್ನೊಂದು ಆರೋಗ್ಯ ಸಮಸ್ಯೆ, ವಾತ ಹೆಚ್ಚಾದಾಗ ಮತ್ತೊಂದು ಆರೋಗ್ಯ ಸಮಸ್ಯೆ, ಹೀಗೆ ಒಂದೊಂದರ ಪ್ರಮಾಣ ಏರುಪೇರಾದಾಗ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ವಾತದೋಷ ಹೆಚ್ಚಾಗಲು ಯಾವ ಆಹಾರ ಸೇವನೆ ಕಾರಣ ಅಂತಾ ತಿಳಿಯೋಣ ಬನ್ನಿ..
ಏನೂ ಸೇವಿಸದೇ ಇದ್ದಾಗ, ಅಥವಾ ಕೆಲವು ಆಹಾರಗಳನ್ನು ಸೇವಿಸಿದಾಗ, ಹೊಟ್ಟೆಯಲ್ಲಿ ವಾಯುತತ್ವ ಉಂಟಾಗುತ್ತದೆ. ಅಂದರೆ ಗ್ಯಾಸ್ ಉತ್ಪತ್ತಿಯಾಗುವುದು. ಇದರಿಂದಲೇ ವಾತದ ಸಮಸ್ಯೆ ಬರುತ್ತದೆ. ವಾತ ಬರಲು, ಗ್ಯಾಸ್ಟಿಕ್ ಸಮಸ್ಯೆ ಮತ್ತು ಕೆಲವು ಆಹಾರಗಳ ಅಲರ್ಜಿಯೇ ಕಾರಣವಾಗಿದೆ. ಹಾಗಾದರೆ ಯಾವ ಆಹಾರ ಸೇವನೆ ಮಾಡಿದಾಗ, ವಾತ ಉಂಟಾಗುತ್ತದೆ ಎಂದರೆ, ತಂಪಾದ ಆಹಾರ, ಹಳೆಯ ಆಹಾರ, ಒಣ ಆಹಾರ ಸೇವನೆಯಿಂದ ವಾತ ಹೆಚ್ಚಾಗುತ್ತದೆ.
ಚಹಾದ ಸೇವನೆಯಿಂದ ವಾತ ಹೆಚ್ಚಾಗುತ್ತದೆ. ದಿನಕ್ಕೆ ಒಮ್ಮೆ, ಅಂದರೆ ತಿಂಡಿ ತಿಂದ ಬಳಿಕ ನೀವು ಚಹಾ ಕುಡಿಯಬಹುದು. ಆದರೆ ಕೆಲವರು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಚಹಾ ಸೇವನೆ ಮಾಡುತ್ತಾರೆ. ಅದರಲ್ಲೂ ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ, ಖಾಲಿ ಹೊಟ್ಟೆಯಲ್ಲಿ ಚಹ ಕುಡಿಯಲೇಬೇಕು. ಇದರಿಂದ ಹೊಟ್ಟೆ ಕ್ಲೀನ್ ಆಗುತ್ತದೆ. ಆದರೆ ಅದು ಆರೋಗ್ಯಕರವಾಗಿ ಕ್ಲೀನ್ ಆಗುವುದಲ್ಲ. ಅನಾರೋಗ್ಯಕರವಾಗಿ ಹೊಟ್ಟೆ ಕ್ಲೀನ್ ಆಗುವುದು. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ, ವಾತದ ಸಮಸ್ಯೆ ಬರುತ್ತದೆ.
ಎರಡನೇಯದಾಗಿ ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಸರಿಯಾದ ಸಮಯಕ್ಕೆ ತಿಂಡಿ, ಊಟದ ಸೇವನೆ ಮಾಡಿ. ಹಾಗಂತ ಅಗತ್ಯಕ್ಕಿಂದ ಹೆಚ್ಚು ತಿಂದರೂ ವಾಯು ಉಂಟಾಗುತ್ತದೆ. ಹಾಗಾಗಿ ಹೊತ್ತಿಗೆ ಸರಿಯಾಗಿ, ಮಿತವಾಗಿ ಆಹಾರ ಸೇವಿಸಿ. ಸರಿಯಾಗಿ ನೀರು ಕುಡಿಯಿರಿ. ದಿನಕ್ಕೆ 3 ಲೀಟರ್ ನೀರು ಕುಡಿದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ವಾತದ ಸಮಸ್ಯೆ ಬರುವುದಿಲ್ಲ. ವಾತದ ಸಮಸ್ಯೆ ಬರಬಾರದು ಅಂದ್ರೆ ಶುದ್ಧ ಹಸುವಿನ ತುಪ್ಪದ ಸೇವನೆ ಅತ್ಯಗತ್ಯವಾಗಿದೆ.




