Hubli News: ಹುಬ್ಬಳ್ಳಿ: ಸಿಎಂ ಬದಲಾವಣೆ ಕಾಂಗ್ರೆಸ್ಸಿನ ಆಂತರಿಕ ವಿಚಾರ ನಿಜ ಆದರೆ, ಇದು ದೊಡ್ಡಮಟ್ಟದ ಗೊಂದಲವನ್ನು ಹುಟ್ಟು ಹಾಕಿದೆ. ಡಿ.ಕೆ.ಶಿವಕುಮಾರ್, ಪರಮೇಶ್ವರ, ಸಿದ್ಧರಾಮಯ್ಯನವರ ಹೇಳಿಕೆಯನ್ನು ನೋಡಿದರೇ ನಿಜಕ್ಕೂ ಬಹುದೊಡ್ಡ ಗೊಂದಲ ಸೃಷ್ಟಿಸಿರುವುದು ನಿಜ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಾಂಗ್ರೆಸ್ಸಿನ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದ ಆಗಿದೆಯೋ ಇಲ್ಲವೋ ಅದು ಅವರಿಗೆ ಗೊತ್ತು. ಆದರೆ ಸಿಎಂ ಸಿದ್ಧರಾಮಯ್ಯನವರು ನಾನೇ ಐದು ವರ್ಷ ಸಿಎಂ ಅಂತಾರೇ. ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ ಅವರು ಒಪ್ಪಂದದ ಬಗ್ಗೆ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಇದೆಲ್ಲಾ ನೋಡಿದರೇ ನಿಜಕ್ಕೂ ಕಾಂಗ್ರೆಸ್ ಗೊಂದಲದ ಗೂಡಾಗಿದೆ ಎಂದರು.
ಕಾಂಗ್ರೆಸ್ಸಿನ ಅಹಿಂದ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೂರು ಬೈ ಎಲೆಕ್ಷನ್ ಗೆದ್ದರೇ ಜಗತ್ತನೇ ಗೆದ್ದಿರುವ ರೀತಿಯಲ್ಲಿ ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡ್ತಿದ್ದಾರೆ ಎಂಬುವುದೇ ಅರ್ಥವಾಗುತ್ತಿಲ್ಲ. ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ಬಹುತೇಕ ಕಡೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಿದೆ ಎಂಬುವುದನ್ನು ಅರಿತುಕೊಳ್ಳಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.