Uttara Kannada News: ಮುಂಡಗೋಡ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಕುಖ್ಯಾತ ರೌಡಿ ಆಸಾಮಿಗಳ ವಿರುದ್ಧ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ (Goonda Act) ಜಂಟಿ ಕಾನೂನು ಸಮರ ಸಾರಿದೆ. ಆರೋಪಿಗಳಾದ ಸಂಜು ಅರ್ಜುನ್ ನವಲೆ (24) ಮತ್ತು ಶಬ್ಬಿರ ಸತ್ತಾರಸಾಬ ಮಸ್ತಮದ್ದಾನಿ (34) ಎಂಬುವವರನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
1.ಸಂಜು ನವಲೆಗೆ ಗೂಂಡಾ ಕಾಯ್ದೆ ಶಿಕ್ಷೆ:
ಗಾಂಧಿನಗರದ ನಿವಾಸಿಯಾದ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಸಂಜು ನವಲೆ ವಿರುದ್ಧ ಮುಂಡಗೋಡ ಮತ್ತು ಹುಬ್ಬಳ್ಳಿ ಸಬ್-ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ, ಕೊಲೆ ಯತ್ನ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಸೇರಿದಂತೆ ಒಟ್ಟು 5 ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈತನ ಹಿನ್ನೆಲೆ ಗಮನಿಸಿ 2021ರಲ್ಲೇ ರೌಡಿಶೀಟ್ ತೆರೆಯಲಾಗಿತ್ತಾದರೂ, ಈತ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದನು. ಸಮಾಜಕ್ಕೆ ಮಾರಕನಾಗಿದ್ದ ಈತನ ವಿರುದ್ಧ ಮುಂಡಗೋಡ ಇನ್ಸ್ಪೆಕ್ಟರ್ ನೀಡಿದ ಪ್ರಸ್ತಾವನೆಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು, ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದಾರೆ.
2. ಶಬ್ಬಿರ ಮಸ್ತಮದ್ದಾನಿ ಜೈಲಿಗೆ:
ಗುಂಜಾವತಿ ಗ್ರಾಮದ ನಿವಾಸಿಯಾದ ಕೂಲಿ ಕೆಲಸ ಮಾಡುತ್ತಿದ್ದ ಶಬ್ಬಿರ ಮಸ್ತಮದ್ದಾನಿ ವಿರುದ್ಧ ಮುಂಡಗೋಡ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ, ದೊಂಬಿ ಹಾಗೂ ಹಣ ವಸೂಲಿ ಸೇರಿದಂತೆ ಒಟ್ಟು 8 ಗಂಭೀರ ಪ್ರಕರಣಗಳು ದಾಖಲಾಗಿದ್ದವು. 2019ರಿಂದಲೇ ರೌಡಿಶೀಟರ್ ಆಗಿದ್ದ ಈತ ದಿನೇ ದಿನೇ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದನು. ಈತನ ಕ್ರಿಮಿನಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಗೂಂಡಾ ಕಾಯ್ದೆ ಜಾರಿಗೊಳಿಸಲು ವರದಿ ಸಲ್ಲಿಸಲಾಗಿತ್ತು.
ಜಿಲ್ಲಾಧಿಕಾರಿಗಳ ಕಡಕ್ ಆದೇಶ:
ಇಬ್ಬರೂ ರೌಡಿಗಳ ಅಪರಾಧ ಇತಿಹಾಸ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಜೂನ್ 8 ರಂದು ಇವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಅಧಿಕೃತ ಆದೇಶ ನೀಡಿದ್ದರು. ಅದರಂತೆ ಜೂನ್ 9 ರಂದು ಮುಂಡಗೋಡ ಪೊಲೀಸರು ಇಬ್ಬರನ್ನೂ ಬಂಧಿಸಿ, ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.
ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ತಂಡದ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.




