ಉತ್ತರಪ್ರದೇಶ: ಕಾಡಿನಿಂದ ನಾಡಿನತ್ತ ಬಂದ ಪ್ರಾಣಿಗಳಿಗೆ ಉಳಿಗಾಲ ಇಲ್ಲ. ಒಂದು ವೇಳೆ ಮನುಷ್ಯರ ಕಣ್ಣಿಗೆ ಇವು ಬಿದ್ದು ಬಿಟ್ಟರೆ ಕಥೆ ಮುಗೀತು. ಆಳಿಗೊಂದು ಏಟು ಹಾಕಿ ಮನಸೋಇಚ್ಛೆ ಬಡಿದು ಕೊಂದು ವಿಕೃತ ಮೆರೆಯುತ್ತಾರೆ. ಇಂಥಹದ್ದೇ ಘಟನೆ ಲಖ್ನೌನಲ್ಲಿ ನಡೆದಿದ್ದು, 31 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲಖನೌನ ಪಿಲಿಬಿಟ್ ಹುಲಿ ಮೀಸಲು ಪ್ರದೇಶದಕ್ಕೆ ಹೊಂದಿಕೊಂಡಂತಿರುವ ಮತೈನಾ ಗ್ರಾಮದ ಬಳಿ ನಿನ್ನೆ ಹುಲಿಯೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿ ಆತಂಕಗೊಂಡ ಗ್ರಾಮಸ್ಥರು ಬಡಿಗೆ, ಈಟಿ ಇತ್ಯಾದಿಗಳನ್ನು ಹಿಡಿದು ಹುಲಿಯ ಬೆನ್ನಟ್ಟಿದ್ದಾರೆ. ಜನರ ಗುಂಪು ಕಂಡು ಭಯಭೀತಗೊಂಡ ಹುಲಿ ದಿಕ್ಕು ಕಾಣದೆ ತಪ್ಪಿಸಿಕೊಳ್ಳಲು ಯತ್ನಸಿತು. ಆದರೂ ಅದನ್ನು ಹಿಡಿಯುವಲ್ಲಿ ಯಶಸ್ವಿಯಾದ ಜನರು ತಮ್ಮ ಕೈಲಿದ್ದ ಕೋಲು, ದೊಣ್ಣೆ ಈಟಿಗಳಿಂದ ಹುಲಿಯ ಮೇಲೆ ಮನಸೋಯಿಚ್ಛೆ ದಾಳಿ ನಡೆಸಿದ್ದಾರೆ. ಪರಿಣಾಮ ತೀವ್ರ ಪೆಟ್ಟು ತಿಂದ ಹುಲಿ ಅಲ್ಲೇ ಪ್ರಾಣಬಿಟ್ಟಿದೆ. ಇನ್ನು ಹುಲಿ ಗ್ರಾಮದ ಬಳಿ ಪ್ರತ್ಯಕ್ಷವಾದ ವಿಷಯವನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದರೆ ಅದನ್ನು ಅರಣ್ಯಕ್ಕೆ ಸುರಕ್ಷಿತಾಗಿ ಸ್ಥಳಾಂತರಿಸುತ್ತಿದ್ದರು. ಆದರೆ ಇದ್ಯಾವುದನ್ನೂ ಮಾಡದ ಗ್ರಾಮಸ್ಥರು ಹುಲಿಯನ್ನೇ ಆಹುತಿ ತೆಗೆದುಕೊಂಡಿದ್ದಾರೆ.
ಇನ್ನು ಘಟನೆ ಕುರಿತು ಅರಣ್ಯ ಇಲಾಖೆ ಸುಮಾರು 31 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹತ್ಯೆಗೀಡಾದ ಹುಲಿ 5 ವರ್ಷ ಪ್ರಾಯದ್ದಾಗಿದ್ದು, ಜನರ ಪೆಟ್ಟಿನಿಂದಾಗಿ ಹುಲಿಯ ತಲೆ, ಬೆನ್ನುಮೂಳೆಗಳು, ಕಾಲುಗಳ ಮೂಳೆ ಮುರಿತವಾಗಿ, ಶ್ವಾಸಕೋಶಕ್ಕೆ ತೀವ್ರ ಪೆಟ್ಟಾಗಿರೋದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.