Spiritual: ಸಕಲ ಕಲಾ ವಲ್ಲಭ. ಶಿವಭಕ್ತ. ಶಸ್ತ್ರ-ಶಾಸ್ತ್ರ ಎರಡರ ಬಗ್ಗೆಯೂ ಸಂಪೂರ್ಣ ಪಾರಂಗತವಾಗಿಸಿಕೊಂಡಿದ್ದ ರಾವಣನ ಸ್ಪೆಶಾಲಿಟಿ ಎಂದರೆ, ಅವನ ಹತ್ತು ತಲೆ. ಹಾಗಾದರೆ ಆ ಹತ್ತು ತಲೆ ಯಾವುದರ ಸಂಕೇತ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾವಣನ ಹತ್ತು ತಲೆಗಳಲ್ಲಿ 6 ತಲೆ ಅರಿಷಡ್ವರ್ಗಗಳನ್ನು ಸೂಚಿಸುತ್ತದೆ. ಜೊತೆಗೆ ಇನ್ನುಳಿದ ನಾಲ್ಕು ತಲೆ, ರಾವಣನ ಗುಣವನ್ನು ಸೂಚಿಸುತ್ತದೆ.
ಕಾಮ. ರಾವಣ ರಾಕ್ಷಸನಾಗಿದ್ದು, ಅವನಲ್ಲಿ ಕಾಮದ ಭಾವನೆ ಇರುವುದು ಸಾಮಾನ್ಯವಾಗಿತ್ತು. ಹಾಗಾಗಿ ಅವನು ರಾಮ- ಲಕ್ಷ್ಮಣರ ವಿರುದ್ಧ ದ್ವೇಷ ಸಾಧಿಸಲು ಹೋಗಿ, ಸೀತೆಯ ಮೇಲೆ ಕಾಮ ಉಂಟಾಗಿ, ಆಕೆಯನ್ನು ಅಪಹರಿಸಿದ್ದ. ಆದರೆ ಆಕೆಯನ್ನು ಎಂದಿಗೂ ಮುಟ್ಟಿರಲಿಲ್ಲ. ಏಕೆಂದರೆ, ಸೀತೆ ಪತಿವೃತಾ ಶಿರೋಮಣಿಯಾಗಿದ್ದಳು. ಅಂಥ ಹೆಣ್ಣನ್ನು ಮುಟ್ಟಿದ ಯಾವ ಶಕ್ತಿಯಾದರೂ, ಸುಟ್ಟು ಹೋಗುತ್ತಿತ್ತು. ಹಾಗಾಗಿ ರಾವಣ ಆಕೆಯನ್ನು ಮುಟ್ಟಿರಲಿಲ್ಲ.
ಕ್ರೋಧ. ಮನುಷ್ಯನ ನಿಜವಾದ ಅಂತ್ಯವೆಂದರೆ, ಅವನಲ್ಲಿರುವ ಕೋಪ. ನಿಮ್ಮ ಕೋಪ ನಿಮ್ಮನ್ನೇ ಸುಡುತ್ತದೆ ಎಂದು ಹೇಳುತ್ತಾರಲ್ಲ. ಅದೇ ರೀತಿ ರಾವಣನಲ್ಲಿದ್ದ ಕ್ರೋಧವೇ, ಅವನ ಅಂತ್ಯಕ್ಕೆ ಕಾರಣವಾಯಿತು.
ಲೋಭ. ಲೋಭವೆಂದರೆ ಆಸೆ. ಈ ಆಸೆಯಿಂದಲೇ ರಾವಣ, ಹಲವು ಪಾಪಕೃತ್ಯಗಳನ್ನು ಮಾಡಿದ್ದ. ತನ್ನ ಸಹೋದರನಾದ ಕುಬೇರನ ರಾಜ್ಯವನ್ನೇ ಕಿತ್ತುಕೊಂಡ. ವಿಭೀಷಣ ರಾಮಭಕ್ತನೆಂದು ಅವನನ್ನು ದೂರವಿರಿಸಿದ್ದ.
ಮೋಹ. ತಾನು ಬಯಸಿದ್ದು, ತನಗೆ ದೊರಕಲೇಬೇಕು ಎಂಬ ಕಾರಣಕ್ಕೆ ರಾವಣ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದ. ಹಾಗಾಗಿ ಹಲವು ಪಾಪಕಾರ್ಯಗಳನ್ನು ಮಾಡಿದ್ದ. ಅಂಥ ಕೆಲಸಗಳಲ್ಲಿ ಸೀತಾಪರಹಣ ಕೂಡ ಒಂದು. ಇದೇ ಅವನ ಅವನತಿಗೆ ಕಾರಣವಾಯಿತು.
ಮದ. ರಾವಣನಿಗೆ ತನ್ನ ಸಂಪತ್ಭರಿತವಾದ ಸಾಮ್ರಾಜ್ಯ, ತನ್ನ ಸೌಂದರ್ಯ, ಬುದ್ಧಿವಂತಿಕೆ, ಸೇನೆ ಎಲ್ಲದರ ಬಗ್ಗೆ ಸೊಕ್ಕಿತ್ತು. ಈ ಸೊಕ್ಕಿನಿಂದಲೇ, ರಾವಣ ಸೀತೆಯನ್ನು ಅಪಹರಿಸಿ, ತನ್ನವಳನ್ನಾಗಿ ಮಾಡಿಕೊಳ್ಳಬೇಕು ಎಂದುಕೊಂಡಿದ್ದ.
ಮತ್ಸರ. ರಾವಣನಿಗೆ ಈ ಪ್ರಪಂಚದಲ್ಲಿ ಈಡೇರಿಸಿಕೊಳ್ಳದ ಆಸೆಗಳನ್ನೆಲ್ಲ ಈಡೇರಿಸಿಕೊಳ್ಳಬೇಕೆಂಬ ಆಸೆ ಇತ್ತು. ಅದರಲ್ಲಿ ಎಲ್ಲರ ರಕ್ತವೂ ಬಿಳಿ ಬಣ್ಣದ್ದಾಗಬೇಕು ಎಂಬ ಆಸೆ ಕೂಡ ಒಂದು. ಇದನ್ನೇ ಮತ್ಸರವೆನ್ನಲಾಗಿದೆ.
ದ್ವೇಷ. ಲಕ್ಷ್ಮಣನನ್ನು ವರಿಸಲು ಆಸೆ ಪಟ್ಟಿದ್ದ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ತುಂಡರಿಸಿದ. ಆಗಿನಿಂದ ರಾಮ ಲಕ್ಷ್ಮಣರ ಮೇಲೆ ರಾವಣನಿಗೆ ದ್ವೇಷವಿತ್ತು.
ಭಯ . ರಾವಣನ ಎಂಟನೇಯ ತಲೆ ಭಯ ಸೂಚಿಸುತ್ತದೆ. ರಾವಣನ ಲಂಕೆ ಸ್ವರ್ಣಭರಿತವಾಗಿತ್ತು. ಕುಬೇರನಿಂದ ಆ ಸ್ವರ್ಣವನ್ನು ರಾವಣ ಕಿತ್ತುಕೊಂಡಿದ್ದರ ಕಾರಣ, ಅವನಿಗೆ ಮತ್ತೆ ತನ್ನ ಸಂಪತ್ತನ್ನು ಯಾರಾದರೂ ಕಿತ್ತುಕೊಳ್ಳುವರೇ ಎಂಬ ಭಯವಿತ್ತು.
ಬುದ್ಧಿ. ರಾವಣನ ಒಂಭತ್ತನೇ ತಲೆ, ಬುದ್ಧಿವಂತಿಕೆಯದ್ದು. ರಾವಣ ರಾಕ್ಷಸ ರಾಜನಾಗಿದ್ದರೂ, ಬ್ರಾಹ್ಮಣನಾಗಿದ್ದ. ಹಾಗಾಗಿ ಅವನಿಗೆ ಸಂಸ್ಕೃತದಿಂದ ಹಿಡಿದು, ಆಯುರ್ವೇದ, ಶಸ್ತ್ರಾಸ್ತ್ರ ಬಳಕೆಯವರೆಗೂ ಜ್ಞಾನವಿತ್ತು. ಹಾಗಾಗಿ ರಾವಣ ಬುದ್ಧಿವಂತನಾಗಿದ್ದ.
ಅಹಂಕಾರ. ತಾನು ಸಕಲ ಕಲಾ ವಲ್ಲಭ, ಸುಂದರ, ಜಾಣ, ಬಲಶಾಲಿ ಎಂಬ ಅಹಂಕಾರ ರಾವಣನ ಕೊನೆಯ ತಲೆಯನ್ನು ಸೂಚಿಸುತ್ತದೆ. ಕೊನೆಗೆ ರಾಕ್ಷಸ ರಾಜ ರಾವಣನ ಅಹಂಕಾರ, ಮಾನವ ರೂಪನಾದ ರಾಮನಿಂದ ವಧಿಸಲ್ಪಟ್ಟು ಕೊನೆಗೊಳ್ಳುತ್ತದೆ.