ರಾಮನ ಪರಮಭಕ್ತ ಯಾರು ಎಂದು ಯಾರನ್ನು ಕೇಳಿದ್ರೂ, ಅವರು ಹೇಳುವ ಮೊದಲ ಹೆಸರು ಹನುಮನೆಂದು. ಅಲ್ಲದೇ, ರಾಮನೆಲ್ಲಿ, ಹನುಮನಲ್ಲಿ ಅನ್ನೋ ಮಾತು ಎಲ್ಲರಿಗೂ ಗೊತ್ತು. ಹಾಗಾದ್ರೆ ಹನುಮ ರಾಮನ ಭಕ್ತನಾಗಿದ್ದು ಹೇಗೆ..? ರಾಮ ಹನುಮನನ್ನು ಮೊದಲ ಬಾರಿ ಭೇಟಿ ಮಾಡಿದ್ದು ಹೇಗೆ..? ಆಗ ಏನಾಗಿತ್ತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ದುಷ್ಟ ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆದೊಯ್ದಾಗ, ರಾಮ ಸೀತೆಯನ್ನು ಹುಡುಕುತ್ತಿದ್ದ. ಈ ವೇಳೆ ಇಬ್ಬರು ವಾನರರು ಜಗಳವಾಡುವ ದೃಶ್ಯ ರಾಮನ ಕಣ್ಣಿಗೆ ಬಿತ್ತು. ಅಲ್ಲಿ ಸುಗ್ರೀವ ಮತ್ತು ವಾಲಿ ರಾಜ್ಯದ ವಿಷಯಕ್ಕೆ ಜಗಳವಾಡುತ್ತಿದ್ದರು. ಇದಾದ ಬಳಿಕ ಅಣ್ಣ ವಾಲಿಗೆ ಹೆದರಿ, ಸುಗ್ರೀವ ಋಷ್ಯಮುಖ ಪರ್ವತದಲ್ಲಿ ಅಡಗಿ ಕೂತಿದ್ದ. ಇದೇ ದೇಶದ ಅಂಜನಿ ಬೆಟ್ಟದ ಮೇಲೆ ಹನುಮಂತ ಅಪ್ಪನ ರಾಜ್ಯವಿತ್ತು. ಅಲ್ಲೇ ಹನುಮನಿರುತ್ತಿದ್ದ.
ಇಲ್ಲೇ ಸಮೀಪದಲ್ಲಿ ಸೀತೆಯನ್ನು ಹುಡುಕಿಕೊಂಡು, ರಾಮ ಮತ್ತು ಲಕ್ಷ್ಮಣರು ಹೊರಟಿದ್ದರು. ಅವರನ್ನು ಕಂಡು ಸುಗ್ರೀವ ಭಯಭೀತನಾದ. ವಾಲಿ ತನ್ನನ್ನು ಕೊಲ್ಲಲು ಇವರನ್ನು ಕಳುಹಿಸಿರಬೇಕೆಂದು ತಿಳಿದ. ಹಾಗಾಗಿ ಹನುಮನ ಸಹಾಯ ಪಡೆಯಬೇಕೆಂದು ಅರಮನೆಗೆ ಹೋಗಿ, ಹನುಮನನ್ನು ಕಂಡ. ಹನುಮ ರಾಮ ಭಜನೆ ಮಾಡುತ್ತ ಧ್ಯಾನ ಮಗ್ನನಾಗಿದ್ದ. ಆಗ ಅವನಲ್ಲಿಗೆ ಹೋದ ಸುಗ್ರೀವ, ಹನುಮ ನೀನು ನನಗೊಂದು ಸಹಾಯ ಮಾಡಬೇಕು.
ಇಲ್ಲೇ ವನದಲ್ಲಿ ಇಬ್ಬರು ಯಾರನ್ನೇ ಹುಡುಕುತ್ತ ಬರುತ್ತಿದ್ದಾರೆ. ಅವರ್ಯಾರು ತಿಳಿದು, ನನಗೆ ತಿಳಿಸುತ್ತಿಯಾ..? ನನಗ್ಯಾಕೋ ಅವರನ್ನ ವಾಲಿ ಕಳುಹಿಸಿದ್ದಾನೆ ಎಂದು ಅನ್ನಿಸುತ್ತಿದೆ, ಎಂದು ಹೇಳಿದ. ಅದಕ್ಕೆ ಹನುಮ ಆಗಲಿ ಎಂದು, ಬ್ರಹ್ಮಚಾರಿಯ ರೂಪ ಬದಲಿಸಿ ರಾಮ ಲಕ್ಷ್ಮಣರ ಬಳಿ ಹೋದ. ಅಲ್ಲಿ ಹೋಗಿ ರಾಮ, ಲಕ್ಷ್ಮಣರನ್ನು ಕುರಿತು, ನೀವು ಯಾರು..? ಯಾರನ್ನು ಹುಡುಕುತ್ತಿದ್ದೀರಿ..? ಎಂದು ಕೇಳಿದ.
ಆಗ ರಾಮ ತಾನು ಯಾರು, ತಾನ್ಯಾಕೆ ಇಲ್ಲಿ ಬಂದಿರುವುದು ಎಂದು ಹೇಳಿದ. ಆಗ ಹನುಮನಿಗೆ ಸಂತೋಷವಾಯಿತು. ನಾನು ಇಷ್ಟು ದಿನ ಆರಾಧಿಸುತ್ತಿದ್ದ ರಾಮ ಇವರೇನಾ ಎಂದು ರಾಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ. ನಂತರ ತಾನು ನಿಮ್ಮ ಪರಮಭಕ್ತ ಹನುಮನೆಂದು ಹೇಳಿ, ತನ್ನ ನಿಜ ರೂಪಕ್ಕೆ ಬಂದ. ಇದಾದ ಬಳಿಕ, ರಾಮ ಹನುಮ ಸೇರಿ, ಸೀತಾ ಮಾತೆಯನ್ನು ಹುಡುಕಲು ಆರಂಭಿಸಿದರು.




