ಹಿಂದೂ ಧರ್ಮದಲ್ಲಿ ಪೂಜೆ, ಹೋಮ, ಹವನ ಮಾಡುವಾಗ, ಕೆಲ ಶ್ಲೋಕ, ಮಂತ್ರಗಳನ್ನ ಹೇಳುತ್ತಾರೆ. ಅಂಥ ಮಂತ್ರಗಳಿಗೆ ಅದರದ್ದೇ ಆದ ಮಹತ್ವ ಮತ್ತು ಶಕ್ತಿಗಳಿದೆ. ಅದನ್ನ ಸುಮ್ಮ ಸುಮ್ಮನೆ ಉಚ್ಛರಿಸಲಾಗುವುದಿಲ್ಲ. ಅದೇ ರೀತಿ ಹೋಮ, ಹವನವಾಗುವ ವೇಳೆ ಆ ಹೋಮಕ್ಕೆ ಕೆಲ ವಸ್ತುಗಳನ್ನು ಹಾಕುತ್ತ, ಸ್ವಾಹಾ ಎಂದು ಹೇಳುತ್ತಾರೆ. ಹಾಗಾದ್ರೆ ಸ್ವಾಹಾ ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಜ್ಞ ಮಾಡುವಾಗ ನಾವು ಕೆಲವು ಪದಾರ್ಥಗಳನ್ನು ಅಗ್ನಿಗೆ ಹಾಕುತ್ತೇವೆ. ಇದರಿಂದ ಅಗ್ನಿ ದೇವ ಸಂತುಷ್ಟನಾಗುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಯಜ್ಞ ಮಾಡುವಾಗ, ತುಪ್ಪ, ಕಾಯಿ ಸೇರಿ ಹಲವು ಪದಾರ್ಥಗಳನ್ನ ಹಾಕಲಾಗತ್ತೆ. ಇದರ ಜೊತೆಗೆ ಈ ಯಜ್ಞ ಕುಂಡದಲ್ಲಿ ಹಾಕುವ ವಸ್ತುಗಳಿಂದ, ಆ ಪ್ರದೇಶದಲ್ಲಿ ನಕಾರಾತ್ಮಕ ಶಕ್ತಿ ಹೊರಟುಹೋಗುತ್ತದೆ. ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮತ್ತು ಆ ಪ್ರದೇಶದ ವಾತಾವರಣ ಆರೋಗ್ಯಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ.
ಈ ಪದಾರ್ಥಗಳನ್ನೆಲ್ಲ ಹಾಕುವಾಗ ಸ್ವಾಹಾ ಎಂದು ಹೇಳಲಾಗತ್ತೆ. ಹಿರಿಯರು ಹೀಗೆ ಹೇಳುವುದನ್ನ ನೀವು ಕೇಳಿರಬಹುದು. ಯಜ್ಞ ಮಾಡುವ ಪುರೋಹಿತರು ಸ್ವಾಹಾ ಹೇಳುವಾಗ, ನೀವು ಕೂಡ ತಪ್ಪದೇ ಸ್ವಾಹಾ ಎಂದು ಹೇಳಿ ಎಂದು ಹೇಳುತ್ತಾರೆ. ಹಾಗಾದ್ರೆ ಯಾಕೆ ಯಜ್ಞಕ್‌ಕೆ ಪದಾರ್ಥ ಹಾಕುವಾಗ, ಸ್ವಾಹಾ ಎಂದು ಹೇಳಬೇಕು ಅಂದ್ರೆ, ಹೀಗೆ ಸ್ವಾಹಾ ಹೇಳಿದರಷ್ಟೇ ನಾವು ಮಾಡಿದ ಯಜ್ಞ ಪೂರ್ಣವಾಗುತ್ತದೆ. ದೇವತೆಗಳಿಗೆ ನಮ್ಮ ನೈವೇದ್ಯ ತಲುಪುತ್ತದೆ.
ಒಮ್ಮೆ ದೇವತೆಗಳೆಲ್ಲ ಬ್ರಹ್ಮನ ಬಳಿ ಬರುತ್ತಾರೆ. ಮತ್ತು ತಮ್ಮ ಸಮಸ್ಯೆಯನ್ನ ಹೇಳಿಕೊಳ್ಳುತ್ತಾರೆ. ನೀವು ಭೂಲೋಕದಲ್ಲಿ ಮನುಷ್ಯರನ್ನ ಸೃಷ್ಟಿಸಿದಿರಿ. ಅವರಿಗೆ ಆಹಾರವನ್ನೂ ಕೊಟ್ಟಿರಿ. ನಮ್ಮನ್ನು ಸೃಷ್ಟಿಸಿದಿರಿ, ಆದರೆ ನಮಗೆ ಭೋಜನದ ವ್ಯವಸ್ಥೆಯನ್ನೇ ಮಾಡಲಿಲ್ಲ. ನಾವು ವರ ಕೊಡಲಷ್ಟೇ ಸೀಮಿತವಾಗಿದ್ದೇವೆ. ನಮಗೆ ಭೋಜನ ಸಿಕ್ಕರೆ, ಇನ್ನೂ ಉತ್ತಮ ಮನಸ್ಸಿನಿಂದ ನಾವು ವರ ನೀಡುತ್ತೇವೆ ಎನ್ನುತ್ತಾರೆ.
ಅದಕ್ಕೆ ಬ್ರಹ್ಮದೇವ, ಈ ಸಮಸ್ಯೆಗೆ ಪರಿಹಾರ ಹುಡುಕಲು, ವಿಷ್ಣುವಿನ ಬಳಿ ಹೋಗುತ್ತಾನೆ. ಅಲ್ಲಿ ವಿಷ್ಣುದೇವ ಹೇಳುತ್ತಾನೆ, ನೀನು ನನ್ನದೇ ಅಂಶವಾಗಿರುವ ಭಗವತಿ ದೇವಿಯ ಬಳಿ ಹೋಗು, ಆಕೆಯ ಬಳಿ ನಿನ್ನ ಸಮಸ್ಯೆಗೆ ಪರಿಹಾರ ಕೇಳು ಎಂದು ಹೇಳುತ್ತಾನೆ. ಅದೇ ರೀತಿ ಬ್ರಹ್ಮದೇವ ಭಗವತಿ ಸ್ವಾಹಾಳ ಬಳಿ ಬರುತ್ತಾನೆ. ಮತ್ತು, ದೇವಿ ಸ್ವಾಹಾ, ನೀನು ಅಗ್ನಿಯ ಪತ್ನಿಯಾಗಬೇಕೆಂದು ನಾವೆಲ್ಲ ಬಯಸುತ್ತೇವೆ.
ಏಕೆಂದರೆ, ನಾನು ಮನುಷ್ಯರನ್ನು ಸೃಷ್ಟಿಸಿದ್ದೇನೆ. ದೇವತೆಗಳನ್ನೂ ಸೃಷ್ಟಿಸಿದ್ದೇನೆ. ಮನುಷ್ಯರು ತಮ್ಮ ಭೋಜನವನ್ನು ತಯಾರಿಸಿಕೊಂಡು, ನೈವೇದ್ಯ ಮಾಡಿಯೇ ಊಟ ಮಾಡುತ್ತಾರೆ. ಆದರೆ ಆ ನೈವೇದ್ಯ ದೇವತೆಗಳಿಗೆ ಬಂದು ಸೇರುತ್ತಿಲ್ಲ. ಆ ನೈವೇದ್ಯ ದೇವತೆಗಳಿಗೆ ಸೇರಬೇಕು ಎಂದರೆ, ನೀನು ಅಗ್ನಿಯನ್ನ ವಿವಾಹವಾಗಿ, ಅವನೊಂದಿಗೆ ಭೂಲೋಕದಲ್ಲಿ ನಡೆಯುವ ಯಜ್ಞದಲ್ಲಿ ಪಾಲ್ಗೊಳ್ಳಬೇಕು. ಮತ್ತು ನೀವಿಬ್ಬರೂ ಸೇರಿ, ಭೋಜನ ಸ್ವೀಕರಿಸಬೇಕು.
ಆಗ ಯಜ್ಞ ಕುಂಡಕ್ಕೆ ಹೋಗುವ ವಸ್ತುಗಳ ಭೋಜನದ ರೂಪದಲ್ಲಿ ಬಂದು ದೇವತೆಗಳಿಗೆ ತಲುಪುತ್ತದೆ. ಮತ್ತು ಮನುಷ್ಯರು ಮಾಡಿದ ಯಜ್ಞಕ್ಕೆ ಫಲ ಸಿಗುತ್ತದೆ ಎಂದು ಹೇಳುತ್ತಾನೆ. ಹಾಗಾಗಿ ಸ್ವಾಹಾ ಅಗ್ನಿಯನ್ನು ವಿವಾಹವಾಗಿ, ಅವನೊಂದಿಗೆ ಯಜ್ಞದಲ್ಲಿ ಭಾಗಿಯಾಗುತ್ತಾಳೆ. ಈ ಕಾರಣಕ್ಕೆ ಸ್ವಾಹಾ ಎನ್ನಬೇಕು. ಹೀಗೆ ಯಜ್ಞ ಮಾಡುವಾಗ ಸ್ವಾಹಾ ಎಂದರೆ, ಯಜ್ಞದ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.