Spiritual Story: ನಾವು ಮುಸ್ಸಂಜೆ ಹೊತ್ತಿನಲ್ಲಿ ಕೆಟ್ಟದಾಗಿ ಮಾತನಾಡಿದರೆ, ಜಗಳವಾಡಿದರೆ, ಹಿರಿಯರು, ಹಾಗೆಲ್ಲ ಮಾತನಾಡಬೇಡ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆ ಎಂದಿರುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ. ಇವರು ಅಸ್ತು ಅಂದ್ರೆ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಅಶ್ವಿನಿ ದೇವತೆಗಳು ಅಂದ್ರೆ, ಸೂರ್ಯಪುತ್ರರು. ಸೂರ್ಯ ಮತ್ತು ಸಂಧ್ಯಾದೇವಿಗೆ ಹುಟ್ಟಿದ ಮಕ್ಕಳೇ ಅಶ್ವಿನಿ ದೇವತೆಗಳು. ಇವರು ಅದೃಷ್ಟ ದೇವತೆಗಳು, ದೇವತೆಗಳ ವೈದ್ಯರು ಅಂತಲೇ ಪ್ರಸಿದ್ಧರು. ವಿಚಿತ್ರವೆಂದರೆ, ಇವರದ್ದು ಮನುಷ್ಯ ದೇಹ ಮತ್ತು ಅಶ್ವದ ಮುಖ. ಇನ್ನು ಯಾಕೆ ಇವರಿಗೆ ಕುದುರೆ ಮುಖ ಎಂದರೆ, ಸೂರ್ಯನ ತಾಪಮಾನ ತಾಳದೇ, ಸಂಧ್ಯಾದೇವಿ ಒದ್ದಾಡುತ್ತಾಳೆ. ಆಗ ಸೂರ್ಯ ತನ್ನ ತಾಪಮಾನ ಕಡಿಮೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ.
ಆದರೆ, ಸೂರ್ಯ ತನ್ನ ತಾಪ ಕಡಿಮೆ ಮಾಡಿದರೆ, ಜೀವಜಂತುಗಳಿಗೆ ತೊಂದರೆಯಾಗುತ್ತದೆ ಎಂದು, ಸಂಧ್ಯಾದೇವಿ ಹಿಮಾಲಯದ ತಪ್ಪಲಿನಲ್ಲಿ ಹೋಗಿ, ಕುದುರೆಯ ರೂಪ ತಾಳಿ ವಿಶ್ರಮಿಸುತ್ತಾಳೆ. ಅಲ್ಲಿಗೆ ಬಂದ ಸೂರ್ಯದೇವ ಸಂಧ್ಯಾದೇವಿಯೇ ಆ ಕುದುರೆ ಎಂದು ಗುರುತಿಸಿ, ತಾನೂ ಕುದುರೆ ರೂಪ ತಾಳಿ ಆಕೆಯೊಂದಿಗೆ ಮಿಲನ ಹೊಂದುತ್ತಾನೆ. ಆಗಲೇ ಅಶ್ವಿನಿ ದೇವತೆಗಳು ಹುಟ್ಟುತ್ತಾರೆ.
ಇನ್ನು ಅಶ್ವಿನಿ ದೇವತೆಗಳು ಸಂಜೆ ಹೊತ್ತಲ್ಲಿ ಭೂಮಿಗೆ ಬರುತ್ತಾರೆ. ಅವರು ಅಸ್ತು ಅಸ್ತು ಎನ್ನುತ್ತಿರುತ್ತಾರೆ. ಅವರು ಅಸ್ತು ಎನ್ನುವಾಗ ನಾವು ಏನು ಮಾತನಾಡುತ್ತೇವೋ, ಅದೇ ಸತ್ಯವಾಗುತ್ತದೆ. ಹಾಗಾಗಿ ಸಂಜೆ ಹೊತ್ತಲ್ಲಿ, ದೇವರಿಗೆ ದೀಪ ಹಚ್ಚಿ, ಪ್ರಾರ್ಥನೆ ಮಾಡಬೇಕು. ಖುಷಿಯಾಗಿರಬೇಕು, ನಮ್ಮ ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು.
ನೀವು ಸಂಜೆ ಹೊತ್ತಲ್ಲಿ, ಶಾಪ ಹಾಕಿದ್ರೆ, ಬೈದರೆ, ಸಿಟ್ಟು ಮಾಡಿದರೆ, ಅಥವಾ ಅಪಶಕುನದ ಮಾತನಾಡಿದರೆ, ಆ ಅಸ್ತು ದೇವತೆಗಳು ಅಸ್ತು ಅಸ್ತು ಅಂದ್ರೆ, ಅದೇ ಮಾತು ಸತ್ಯವಾಗುತ್ತದೆ ಅನ್ನೋದು ಹಿಂದೂ ಧರ್ಮದಲ್ಲಿರುವ ನಂಬಿಕೆ.