ಪೂಜೆ ಮಾಡುವ ವೇಳೆ, ಕೆಲವರಿಗೆ ಕಣ್ಣೀರು ಬರೋದು ಯಾಕೆ..?

ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಗಳಿಗೆ ಪ್ರಥಮ ಸ್ಥಾನವನ್ನ ನೀಡಲಾಗಿದೆ. ಅಲ್ಲದೇ, ಯಾರು ಮನೆಯಲ್ಲಿ ಪ್ರತಿದಿನ ಪೂಜೆ ಮಾಡುತ್ತಾರೋ, ಅವರು ಧನವಂತರು, ಆರೋಗ್ಯವಂತರಾಗಿರುತ್ತಾರೆ. ಅವರ ಮನೆಯಲ್ಲಿ ಧನಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಮನೆ ಜನ ಸದಾ ನೆಮ್ಮದಿಯಿಂದಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಕೆಲವರಿಗೆ ಪೂಜೆ ಮಾಡುವಾಗಲೇ, ಕಣ್ಣೀರು ಬರುತ್ತದೆ. ಹೀಗೆ ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ನಮಗೆ ಕಷ್ಟ ಬಂದಾಗ, ನಾವು ದೇವರನ್ನು ನೆನೆಯುತ್ತೇವೆ. ನಮ್ಮ ಮನಸ್ಸು ಗೊಂದಲದಲ್ಲಿದ್ದಾಗ, ಒಂದೆರಡು ನಿಮಿಷ ದೇವರ ಧ್ಯಾನ ಮಾಡಿದರೆ, ಅಥವಾ ದೇವರ ಕೋಣೆಯಲ್ಲಿ, ದೇವಸ್ಥಾನದಲ್ಲಿ ಸುಮ್ಮನೆ ಕುಳಿತರೂ ಸಾಕು, ಮನಸ್ಸಿಗೇನೋ ಒಂದು ರೀತಿಯ ಸಮಾಧಾನ ಸಿಗುತ್ತದೆ. ಹೀಗಿರುವಾಗ, ಕೆಲವರಿಗೆ ತಮಗೇ ಗೊತ್ತಿಲ್ಲದೇ, ಕಣ್ಣೀರು ಬಂದುಬಿಡುತ್ತದೆ. ಇದರ ಹಿಂದೆ ಒಂದು ಕಾರಣವಿದೆ.

ಈ ಪ್ರಪಂಚದಲ್ಲಿ ಮೊದಲು ಉದ್ಭವಿಸಿದವರೆಂದರೆ ಶಿವನೆಂಬ ನಂಬಿಕೆ ಇದೆ. ಶಿವನ ಜನ್ಮಕ್ಕೂ ಮುನ್ನ, ಈ ಪ್ರಪಂಚ ಖಾಲಿಯಾಗಿತ್ತು. ಒಂದು ಜೀವವೂ ಕೂಡ ಈ ಭೂಮಿಯ ಮೇಲಿರಲಿಲ್ಲ. ಆದರೆ ಶಿವನ ಜನ್ಮದ ಬಳಿಕ, ಹಲವು ಶಕ್ತಿಗಳು ಹುಟ್ಟಿದವು. ಅಗ್ನಿ- ವಾಯು- ಜಲದ ನಿರ್ಮಾಣವಾಯಿತು. ಜೀವ ಜಂತುಗಳು ಸೃಷ್ಟಿಯಾದವು. ಗಿಡ- ಮರ, ಕಾಡು ಸೃಷ್ಟಿಯಾಯಿತು. ಹಾಗಾಗಿಯೇ ಹಿರಿಯರು, ಈ ಪ್ರಪಂಚದ ಕಣ ಕಣದಲ್ಲೂ ಶಿವನ ವಾಸವಿದೆ ಎಂದು ಹೇಳುತ್ತಾರೆ.

ಹಾಗಾಗಿಯೇ ಪೂಜೆ ವೇಳೆ ಅಥವಾ ದೇವರ ಮುಂದೆ ನಾವು ಕುಳಿತಾಗ, ನಮ್ಮ ಕಣ್ಣಲ್ಲಿ ನೀರು ಬಂದ್ರೆ, ಒಂದು ಸಕಾರಾತ್ಮಕ ಶಕ್ತಿ ನಮ್ಮೊಂದಿಗಿದೆ. ಶಿವ ನಮ್ಮೊಂದಿಗಿದ್ದಾನೆಂಬ ಸಂಕೇತ ನೀಡಿದ್ದಾನೆಂದು ಅರ್ಥವೆಂದು ಹಿರಿಯರು ಹೇಳುತ್ತಾರೆ. ಹೀಗೆ ನಿಶ್ಕಲ್ಮಶವಾದ, ಶುದ್ಧ ಮನಸ್ಸಿನಿಂದ ದೇವರಿಗೆ ಸಲ್ಲಿಸುವ ಪೂಜೆ, ಅವನಿಗೆ ತಲುಪುತ್ತದೆ ಅಂತಾ ಹೇಳಲಾಗಿದೆ.

About The Author