Spiritual: ಶ್ರಾವಣ ಬಂತು ಅಂದ್ರೆ ಹಲವರಿಗೆ ಖುಷಿ. ಮತ್ತೆ ಕೆಲವರಿಗೆ ಬೇಸರ. ಖುಷಿ ಏಕೆಂದರೆ, ಈ ಮಾಸದಲ್ಲಿ ಹಲವಾರು ಹಬ್ಬಗಳು, ವೃತಾಚರಣೆಗಳು ಬರುತ್ತದೆ. ದೇವರ ದರ್ಶನ, ಪೂಜೆ ಪುನಸ್ಕಾರ, ಹೋಮ ಹವನಗಳಲ್ಲಿ ಭಾಗಿಯಾಗಿ, ರುಚಿ ರುಚಿಯಾದ ಪ್ರಸಾದ, ಭಕ್ಷ್ಯ ಭೋಜನಗಳನ್ನು ತಿನ್ನಬಹುದು ಎನ್ನುವವರು ಒಂದು ಕಡೆಯಾದರೆ, ಶ್ರಾವಣ ಮುಗಿಯುವವರೆಗೂ ನಾನ್‌ವೆಜ್ ಮುಟ್ಟವ ಹಾಗಿಲ್ಲ ಅನ್ನೋ ಬೇಸರದಲ್ಲಿ ಕೆಲವರು ಇರುತ್ತಾರೆ. ಹಾಗಾದರೆ, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳಲು ಕಾರಣವೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅನ್ನೋದಕ್ಕೆ ಇರುವ ಧಾರ್ಮಿಕ ಕಾರಣವೆಂದರೆ, ಈ ಮಾಸದಿಂದಲೇ ಹಬ್ಬಗಳು ಶುರುವಾಗುತ್ತದೆ. ಯುಗಾದಿ ಹಿಂದೂಗಳಿಗೆ ಹೊಸ ವರ್ಷವಾದರೂ, ಅದಾದ ಬಳಿಕ ಬರುವ ಹಬ್ಬಗಳು ಶುರುವಾಗೋದು ಶ್ರಾವಣ ಮಾಸದಲ್ಲಿ. ನಾಗರಪಂಚಮಿ, ರಕ್ಷಾಬಂಧನ, ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಠಮಿ, ಹೀಗೆ ಸಾಲು ಸಾಲು ಹಬ್ಬಗಳು ಬರುತ್ತದೆ.
ಅಲ್ಲದೇ ಶ್ರಾವಣ ಮಾಸದಲ್ಲಿ ಶಿವನ ಪಪೂಜೆಯನ್ನು ಭಕ್ತಿಭಾವದಿಂದ ಮಾಡಬೇಕು. ಮಾಂಸಾಹಾರ ಸೇವನೆ ಮಾಡಿದಾಗ, ನಮ್ಮಲ್ಲಿ ತಾಮಸಿಕ ಮತ್ತು ರಾಜಸಿಕ ಗುಣಗಳು ಹೆಚ್ಚಾಗುತ್ತದೆ. ಸಾತ್ವಿಕ ಗುಣ ಕಡಿಮೆಯಾಗುತ್ತದೆ. ಈ ವೇಳೆ ಭಕ್ತಿ ಇರುವುದಿಲ್ಲ. ಹಾಗಾಗಿ ಶುದ್ಧ ಮನಸ್ಸಿನಿಂದ ಭಕ್ತಿ ಮಾಡಲು ಸಾತ್ವಿಕ ಗುಣ ಬೇಕು. ಆ ಗುಣ ಬೇಕೆಂದಲ್ಲಿ, ನೀವು ಮಾಂಸಾಹಾರ ಸೇವನೆ ತ್ಯಜಿಸಬೇಕಾಗುತ್ತದೆ. ಈ ಕಾರಣಕ್ಕೆ ಮಾಂಸಾಹಾರ ಸೇವನೆ ಮಾಡಬಾರದು ಎನ್ನಲಾಗುತ್ತದೆ.
ಇನ್ನು ಈ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅನ್ನೋದಕ್ಕೆ ಇರುವ ವೈಜ್ಞಾನಿಕ ಕಾರಣವೇನೆಂದರೆ, ಇದು ಮಳೆಗಾಲವಾಗಿರುವುದರಿಂದ, ಜಲಚರಗಳು, ಪ್ರಾಣಿ ಪಕ್ಷಿಗಳು ಸಂತಾನೋತ್ಪತತ್ತಿ ಮಾಡುತ್ತದೆ. ಈ ಕಾಲದಲ್ಲೂ ಮೀನು, ಮಾಂಸಗಳ ಸೇವನೆ ಮಾಡಿದರೆ, ಸಂತಾನೋತ್ಪತ್ತಿ ಕಡಿಮೆಯಾಗಿ, ಅಸಮತೋಲನ ಉಂಟಾಗುತ್ತದೆ. ಹಾಗಾಗಿ ನಾನ್‌ವೆಜ್ ಸೇವನೆ ಮಾಡಬಾರದು ಎನ್ನಲಾಗಿದೆ.
ಇಷ್ಟೇ ಅಲ್ಲದೇ, ಈಗ ಸೂರ್ಯನ ಕಿರಣಗಳು ಬೀಳುವುದು ಕಡಿಮೆಯಾಗುತ್ತದೆ. ಹಾಗಾಗಿ ನಮ್ಮ ಜೀರ್ಣಶಕ್ತಿ ಅಷ್ಟು ಉತ್ತಮವಾಗಿ ಇರುವುದಿಲ್ಲ. ಈ ವೇಳೆ ಮಾಂಸಾಹಾರ ಸೇವನೆ ಮಾಡಿದ್ದಲ್ಲಿ, ನಮ್ಮ ಆರೋಗ್ಯ ಹದಗೆಡುತ್ತದೆ. ತಿಂದ ಮಾಂಸಾಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ಹಲವು ರೋಗಗಳು ಬರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳಲಾಗುತ್ತದೆ.