Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ಮೊದಲ ಭಾಗದಲ್ಲಿ ನಾವು ಭಾರತದ 5 ಶ್ರೀಮಂತ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಉಳಿದ ದೇವಸ್ಥಾನಗಳ ಬಗ್ಗೆ ಮಾಹಿತಿ ತಿಳಿಯೋಣ.
ಸಿದ್ಧಿವಿನಾಯಕ ದೇವಸ್ಥಾನ. ಮುಂಬೈನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಮೊದಲನೇಯದಾಗಿ ಬರುವುದೇ ಶ್ರೀ ಸಿದ್ಧಿವಿನಾಯಕ ದೇವಸ್ಥಾನ. ಇಲ್ಲಿ ದೇಶ ವಿದೇಶಗಳಿಂದ ಗಣಪತಿಯ ಭಕ್ತರು ಬಂದು, ದರ್ಶನ ಪಡೆದು ಹೋಗುತ್ತಾರೆ. ಇಲ್ಲಿನ ಆದಾಯ ಏಕೆ ಹೆಚ್ಚಿದೆ..? ಈ ದೇವಸ್ಥಾನವೇಕೆ ಇಷ್ಟು ಶ್ರೀಮಂತವಾಗಿದೆ ಎಂದರೆ, ಇಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು, ಸೆಲೆಬ್ರಿಟಿಗಳು ಬಂದು ಪೂಜೆ ಸಲ್ಲಿಸುತ್ತಾರೆ. ಏಕೆಂದರೆ, ಯಾವುದಾದರೂ ಸಿನಿಮಾ ಶುರು ಮಾಡುವುದಕ್ಕೂ ಮುಂಚೆ, ಅಥವಾ ಚುನಾವಣೆಗೆ ನಿಲ್ಲುವ ಮುಂಚೆ ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಹೋದರೆ, ಅವರಿಗೆ ಯಶಸ್ಸು ಸಿಗುವುದು ಖಂಡಿತವೆಂಬ ನಂಬಿಕೆ ಇದೆ. ಅಲ್ಲದೇ, ಚಿಕ್ಕ ಪುಟ್ಟ ವ್ಯಾಪಾರ ಮಾಡುವವರು ಕೂಡ, ಇಲ್ಲಿ ಬಂದು ಸಿದ್ಧಿವಿನಾಯಕನ ದರ್ಶನ ಮಾಡಿ, ಪೂಜೆ ಸಲ್ಲಿಸಿ ಹೋದರೆ, ಅವನು ದೊಡ್ಡ ವ್ಯಾಪಾರಸ್ಥನಾಗುವಂತೆ ಗಣಪತಿ ಹರಸುತ್ತಾನೆಂಬ ನಂಬಿಕೆ ಇದೆ.
ಪುರಿ ಜಗನ್ನಾಥ್ ದೇವಸ್ಥಾನ. ಶ್ರೀಕೃಷ್ಣನ ಜೊತೆ, ಅವನ ಸಹೋದರನಾದ ಬಲರಾಮ ಮತ್ತು ಸಹೋದರಿಯಾದ ಸುಭದ್ರೆಯನ್ನು ಪೂಜಿಸಲ್ಪಡುವ ಒಂದೇ ಒಂದು ದೇವಸ್ಥಾನ ಅಂದ್ರೆ, ಅದು ಪುರಿ ಜಗನ್ನಾಥ ದೇವಸ್ಥಾನವಾಗಿದೆ. ಪ್ರತೀ ವರ್ಷ ಈ ದೇವಸ್ಥಾನದಲ್ಲಿ ರಥೋತ್ಸವ ನಡೆಯುತ್ತದೆ. ಆ ರಥೋತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಭಕ್ತರು, ಪ್ರವಾಸಿಗರು ಬರುತ್‌ತಾರೆ. ಈ ವೇಳೆ ಹೆಚ್ಚು ದೇಣಿಗೆ ಸಂಗ್ರಹವಾಗುತ್ತದೆ. ಮತ್ತು ಕೋಟಿ ಕೋಟಿ ಬೆಲೆ ಬಾಳುವಂಥ ಚಿನ್ನ, ಬೆಳ್ಳಿಯನ್ನ ಕೂಡ ಈ ದೇವಸ್ಥಾನ ಹೊಂದಿದೆ.
ವೈಷ್ಣೋದೇವಿ ದೇವಸ್ಥಾನ. ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನ, ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಇಲ್ಲಿ ಪಾರ್ವತಿ ದೇವಿ, ವೈಷ್ಣೋದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಬರೀ ಭಾರತದಲ್ಲಿರುವ ಭಕ್ತರಷ್ಟೇ ಅಲ್ಲದೇ, ವಿದೇಶಗಳಿಂದಲೂ ಭಕ್ತರು ವೈಷ್ಣೋದೇವಿ ದರ್ಶನಕ್ಕೆ ಬರುತ್ತಾರೆ. ಈ ದೇವಸ್ಥಾನದ ವಾರ್ಷಿಕ ಆದಾಯ 500 ಕೋಟಿಗೂ ಹೆಚ್ಚಿದೆ.
ಮಧುರೈ ಮೀನಾಕ್ಷಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಶಿವ ಮತ್ತು ಪಾರ್ವತಿ ಇಬ್ಬರನ್ನೂ ಪೂಜಿಸಲಾಗುತ್ತದೆ. ಆದರೆ ಇಲ್ಲಿ ಮೀನಾಕ್ಷಿ ರೂಪದಲ್ಲಿರುವ ಪಾರ್ವತಿ ದೇವಿಗೆ ಮೊದಲ ಆದ್ಯತೆ. ಬಳಿಕ ಸುಂದರೇಶ್ವರನಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಇಲ್ಲಿ ದಿನಕ್ಕೆ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಾರೆ.
ಸೋಮನಾಥ ದೇವಸ್ಥಾನ. ಗುಜರಾತ್‌ನ ಸೌರಾಷ್ಟ್ರದಲ್ಲಿರುವ ಸೋಮನಾಥ ದೇವಸ್ಥಾನ, ಭಾರತದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾಗಿದೆ. ಮೊಹಮ್ಮದೇ ಘಜ್ನಿ ಈ ದೇವಸ್ಥಾನವನ್ನು 17 ಬಾರಿ ಲೂಟಿ ಮಾಡಿದ್ದನು. ಆದರೂ ಈ ದೇವಸ್ಥಾನ ಭಾರತದ ಶ್ರೀಮಂತ ದೇಶವಾಗಿಯೇ ಉಳಿದಿದೆ. ಇದು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಇಲ್ಲಿ ವರ್ಷಕ್ಕೆ ಕೋಟ್ಯಂತರ ಭಕ್ತರು ಬಂದು, ಸೋಮನಾಥನ ದರ್ಶನ ಮಾಡಿ ಹೋಗುತ್ತಾರೆ.