ಬೆಂಗಳೂರು: ಬೆಂಗಳೂರಿನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಒಂದಾದ ಗರುಡಾ ಮಾಲ್ ತನ್ನ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಕೊವಿಡ್ ನಿಯಮಗಳನ್ನು ಜಾರಿಗೊಳಿಸದ ಕಾರಣದಿಂದ ಬಿಬಿಎಂಪಿಯಿಂದ 20,000 ರೂ. ದಂಡವನ್ನು ವಿಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ತಪಾಸಣೆಯಲ್ಲಿ ಗರುಡಾ ಮಾಲ್ನೊಳಗೆ ಬರುವ ಗ್ರಾಹಕರು ಎರಡೂ ಲಸಿಕೆಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಿಲ್ಲ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ ಎಂಬುದು ಪತ್ತೆಯಾಗಿದೆ. ಹಾಗೇ, ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸಲಾಗಿಲ್ಲ. ಮಾಲ್ನೊಳಗೆ ಇರುವ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ ಎಂದು ಅಧಿಕಾರಿಗಳು ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಎ.ಎಸ್. ಬಾಲಸುಂದರ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಲ್‌ಗಳಿಗೆ ಭೇಟಿ ನೀಡುವವರು ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ಕೆಲವು ವಾರಗಳ ಹಿಂದೆ ಎಲ್ಲ ಮಾಲ್‌ಗಳಿಗೆ ತೋರಿಸಲಾಗಿದೆ. ಈ ತಪಾಸಣೆ ಮಾಡಲು ಒಬ್ಬ ವ್ಯಕ್ತಿಗೆ ಕೇವಲ ಒಂದು ನಿಮಿಷ ಸಾಕಾಗುತ್ತದೆ. ಆದರೆ, ಗರುಡಾ ಮಾಲ್ ಸಿಬ್ಬಂದಿ ಈ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಇದು ಮೊದಲ ಘಟನೆಯಾಗಿರುವುದರಿಂದ ಕೊವಿಡ್ ಮಾರ್ಗಸೂಚಿಯ ಆದೇಶಗಳನ್ನು ಅನುಸರಿಸದ ಕಾರಣಕ್ಕೆ ಎಚ್ಚರಿಕೆಯ ಸಂದೇಶವಾಗಿ ಸಣ್ಣ ಮೊತ್ತವನ್ನು ದಂಡವಾಗಿ ವಿಧಿಸಿದ್ದೇವೆ. ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪರಿಶೀಲಿಸದ ಮಾಲ್‌ಗಳು ಕಂಡುಬಂದರೆ ಮತ್ತು ಸರಿಯಾದ ಮಾರ್ಗಸೂಚಿಗಳನ್ನು ಅನುಸರಿಸದಿರುವುದು ದೃಢಪಟ್ಟರೆ ಆ ಮಾಲ್‌ಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ದಂಡವನ್ನು ವಿಧಿಸಲಾಗುವುದು ಎಂದಿದ್ದಾರೆ.
.