Dharwad News: ಧಾರವಾಡ ಜಿಲ್ಲೆಯ ಪ್ರಮುಖ ಕೃಷಿ ಕೇಂದ್ರವಾಗಿರುವ ಅಣ್ಣಿಗೇರಿ ತಾಲೂಕಿನಲ್ಲಿ ಈ ಬಾರಿ ರೈತರು ಸಾಂಪ್ರದಾಯಿಕ ಹೆಸರು ಬೆಳೆಯ ಬದಲಾಗಿ ಉದ್ದು ಬೆಳೆಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಉದ್ದು ಬಿತ್ತನೆ ಪ್ರದೇಶದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಧಾರವಾಡ ಜಿಲ್ಲೆಯ ಪ್ರಮುಖ ಕೃಷಿ ಕೇಂದ್ರವಾದ ಅಣ್ಣಿಗೇರಿ ತಾಲೂಕಿನ ಕಪ್ಪು ಹತ್ತಿ ಮಣ್ಣಿನ ಒಡಲಲ್ಲಿ ಈ ಬಾರಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಗೋಚರಿಸುತ್ತಿದೆ. ಸಾಂಪ್ರದಾಯಿಕವಾಗಿ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಹೆಸರಾಗಿದ್ದ ಈ ಭಾಗದ ರೈತರು, ಈ ಬಾರಿ ಅಚ್ಚರಿಯ ರೀತಿಯಲ್ಲಿ ಉದ್ದು ಬೆಳೆಯ ಕಡೆಗೆ ಹೆಚ್ಚಿನ ಒಲವು ತೋರಿದ್ದಾರೆ.
ಕಳೆದ ಐದು ವರ್ಷಗಳ ಬಿತ್ತನೆ ದತ್ತಾಂಶವನ್ನು ಗಮನಿಸಿದರೆ, ತಾಲೂಕಿನಲ್ಲಿ ಉದ್ದು ಬಿತ್ತನೆಯಾದ ಪ್ರದೇಶ ದಾಖಲೆ ಮಟ್ಟದಲ್ಲಿ ಹೆಚ್ಚಳ ಕಂಡಿದ್ದು, ದ್ವಿದಳ ಧಾನ್ಯಗಳ ಕೃಷಿಯಲ್ಲಿ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ. ಹೆಸರು ಬೆಳೆಯ ಜೊತೆಗೆ ಉದ್ದು ಕೂಡ ತಾಲೂಕಿನ ಮುಂಗಾರಿನ ಪ್ರಮುಖ ಬೆಳೆಯಾಗಿ ಹೊರಹೊಮ್ಮುತ್ತಿದ್ದು, ಇದರ ಹಿಂದೆ ರೈತರ ಆರ್ಥಿಕ ಹಾಗೂ ತಾಂತ್ರಿಕ ಲೆಕ್ಕಾಚಾರಗಳು ಪ್ರಮುಖ ಪಾತ್ರವಹಿಸಿವೆ.
ಕಳೆದ ಐದು ವರ್ಷಗಳಲ್ಲಿ ಉದ್ದು ಬೆಳೆಯನ್ನು ಕೇವಲ ಉಪಬೆಳೆಯಾಗಿ ಅಥವಾ ಸೀಮಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಗಳು ಸಕಾಲದಲ್ಲಿ ಆರಂಭವಾಗುತ್ತಿದ್ದಂತೆ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಮುಗಿಬಿದ್ದು ಉದ್ದಿನ ಬೀಜಗಳನ್ನು ಖರೀದಿಸಿದ್ದು, ತಾಲೂಕಿನಾದ್ಯಂತ ಉದ್ದು ಬಿತ್ತನೆ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಉತ್ತಮ ಇಳುವರಿ ನಿರೀಕ್ಷೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಸಾಧ್ಯತೆ ಹಾಗೂ ಹವಾಮಾನದ ಅನುಕೂಲಕರ ವಾತಾವರಣದಿಂದಾಗಿ ರೈತರು ಉದ್ದು ಬೆಳೆಯತ್ತ ಹೆಚ್ಚು ಆಸಕ್ತಿ ತೋರಿದ್ದು, ಈ ಬಾರಿ ಉದ್ದು ಬೆಳೆ ಅಣ್ಣಿಗೇರಿ ತಾಲೂಕಿನ ಕೃಷಿ ಕ್ಷೇತ್ರದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.




