Koppala News: ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ (KARO) ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಸಾವಿರಾರು ವಿಶೇಷ ಚೇತನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಗಿದೆ.
ಕೊಪ್ಪಳ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಸಂಘಟಿತರಾದ ವಿಕಲಚೇತನರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವಿಕಲಚೇತನರು ಎದುರಿಸುತ್ತಿರುವ ತೀವ್ರ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ. ಈ ಮನವಿ ಪತ್ರದಲ್ಲಿ ವಿಕಲಚೇತನರ ಪ್ರಮುಖ ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಡಲಾಗಿದೆ.
ಕಳೆದ 3 ತಿಂಗಳಿಂದ ಸ್ಥಗಿತಗೊಂಡಿರುವ ವಿಕಲಚೇತನರ ಮಾಸಾಶನವನ್ನು ತಕ್ಷಣವೇ ಬಿಡುಗಡೆಗೊಳಿಸಿ ಬಡ ವಿಕಲಚೇತನರ ಜೀವನೋಪಾಯಕ್ಕೆ ನೆರವಾಗಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸ್ವಂತ ಕಟ್ಟಡವನ್ನು ಒದಗಿಸಿಕೊಡಬೇಕು. ಕೊಪ್ಪಳದ ಜಿಲ್ಲಾ ವಿಕಲಚೇತನರ ಭವನವನ್ನು ಸಂಪೂರ್ಣವಾಗಿ ವಿಕಲಚೇತನರ ಒಕ್ಕೂಟದ ಸ್ವಾಧೀನಕ್ಕೆ ವಹಿಸಿಕೊಟ್ಟು ಸಂಸ್ಥೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ.
ಅದರೊಂದಿಗೆ, ವಿಕಲಚೇತನರ ಕ್ಷೇಮಾಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಬಹುಉದ್ದೇಶ ಪುನರ್ವಸತಿ ಕಾರ್ಯಕರ್ತರು (MRW), ಗ್ರಾಮ ಪುನರ್ವಸತಿ ಕಾರ್ಯಕರ್ತರು (VRW) ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ (URW) ಸಾರಿಗೆ ಪ್ರಯಾಣ ಭತ್ಯೆಯನ್ನು ನಿಯಮಿತವಾಗಿ ಮಂಜೂರು ಮಾಡಬೇಕು.
ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ಕಾಯ್ದಿರಿಸಲಾದ ಶೇಕಡಾ 5 ರಷ್ಟು ಅನುದಾನವನ್ನು ಫಲಾನುಭವಿಗಳು ವೈಯಕ್ತಿಕವಾಗಿ ಬಳಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಬೇಕು.
ಜಿಲ್ಲೆಯ ಕಾರಟಗಿ,ಕನಕಗಿರಿ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ತಕ್ಷಣವೇ ವಿಶೇಷ ಯುಡಿಐಡಿ (UDID) ಕಾರ್ಡ್ ನೋಂದಣಿ ಕ್ಯಾಂಪ್‌ಗಳನ್ನು ಆಯೋಜಿಸಿ, ಅರ್ಹ ವಿಕಲಚೇತನರು ಸರ್ಕಾರದ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬರುವ ದಿನಗಳಲ್ಲಿ ಜಿಲ್ಲಾಡಳಿತವು ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮೂಲಕ ವಿಕಲಚೇತನರ ಬಾಳಿಗೆ ಆಸರೆಯಾಗಬೇಕೆಂದು ಒಕ್ಕೂಟವು ನಿರೀಕ್ಷಿಸಿದೆ.




