ನಾವು ನಮ್ಮ ದಕ್ಷಿಣ ಕನ್ನಡದಲ್ಲಿ ಸಿಗುವ ಪತ್ರೋಡೆಯನ್ನ ತಿಂದಿರ್ತೀವಿ. ಕೆಸುವಿನ ಸೊಪ್ಪಿನಿಂದ ಮಾಡುವ ಈ ಖಾದ್ಯ, ಖಾರ ಖಾರವಾಗಿ, ರುಚಿ ರುಚಿಯಾಗಿರತ್ತೆ. ಇದರೊಂದಿಗೆ ತೆಂಗಿನ ಎಣ್ಣೆ ಇದ್ದರೆ, ಇನ್ನು ಸೂಪರ್. ಇದೇ ರೀತಿ ಉತ್ತರ ಭಾರತೀಯರು ಕೂಡ ಪಾತ್ರಾ ಅನ್ನೋ ಖಾದ್ಯವನ್ನ ತಯಾರಿಸುತ್ತಾರೆ. ಪತ್ರೋಡೆ ಹಾಗೆ ಇದನ್ನ ತಯಾರಿಸಲಾಗುತ್ತದೆ. ಆದ್ರೆ ಇದಕ್ಕೆ ಬಳಸುವ ಸಾಮಗ್ರಿ ಮಾತ್ರ ಬೇರೆಯಾಗಿರತ್ತೆ. ಗುಜರಾತ್ನಲ್ಲಿ ಹೆಚ್ಚಾಗಿ ಈ ರೆಸಿಪಿ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಈ ರೆಸಿಪಿಯನ್ನ ಹೇಗೆ ಮಾಡೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಕಪ್ ಕಡಲೆ ಹಿಟ್ಟು, 1 ಕಪ್ ಅಕ್ಕಿ ಹಿಟ್ಟು, 1/4 ಸ್ಪೂನ್ ಬೇಕಿಂಗ್ ಸೋಡಾ, ಎರಡು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು ಮತ್ತು ಸೋಂಪು. ಅರ್ಧ ಚಮಚ ವೋಮ, ಚಿಟಿಕೆ ಹಿಂಗು, ಒಂದು ಚಮಚ ಹುರಿದ ಕಡಲೆ ಬೀಜದ ಪುಡಿ, ಒಂದು ಚಮಚ ಎಳ್ಳು, ಒಂದು ಚಮಚ ಬೆಳ್ಳುಳ್ಳಿ ಪೇಸ್ಟ್, ಒಂದು ಸ್ಪೂನ್ ಶುಂಠಿ- ಹಸಿ ಮೆಣಸಿನ ಪೇಸ್ಟ್, ಒಂದು ಸ್ಪೂನ್ ಧನಿಯಾ ಪುಡಿ, ಕೊಂಚ ಅರಿಶಿನ ಪುಡಿ, ಒಂದು ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಅರ್ಧ ಕಪ್ ಬೆಲ್ಲ, ಎರಡು ಸ್ಪೂನ್ ಹುಣಸೆ ನೀರು, ಅರ್ಧ ಚಮಚ ನಿಂಬೆರಸ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಬೇಕಿಂಗ್ ಸೋಡಾ, ಜೀರಿಗೆ, ಕೊತ್ತೊಂಬರಿ ಕಾಳು ಮತ್ತು ಸೋಂಪು. ವೋಮ, ಚಿಟಿಕೆ ಹಿಂಗು, ಹುರಿದ ಕಡಲೆ ಬೀಜದ ಪುಡಿ, ಎಳ್ಳು, ಬೆಳ್ಳುಳ್ಳಿ ಪೇಸ್ಟ್, ಶುಂಠಿ- ಹಸಿ ಮೆಣಸಿನ ಪೇಸ್ಟ್, ಧನಿಯಾ ಪುಡಿ, ಕೊಂಚ ಅರಿಶಿನ ಪುಡಿ,ಖಾರದ ಪುಡಿ, ಗರಂ ಮಸಾಲ, ಉಪ್ಪು ಇವಿಷ್ಟನ್ನ ಸೇರಿಸಿ ಮಿಕ್ಸ್ ಮಾಡಿ. ಈಗ ಇದಕ್ಕೆ ನಿಂಬೆರಸ, ಒಂದು ಸ್ಪೂನ್ ಬಿಸಿ ಮಾಡಿದ ಎಣ್ಣೆ, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಹಿಟ್ಟು ತಯಾರಿಸಿ. ಹಿಟ್ಟು ಪತ್ರೋಡೆ ಹಿಟ್ಟಿನ ಹದಕ್ಕೆ ಇರಲಿ.
ಈಗ ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದು, ಅದರ ಮುಂದಿನ ಭಾಗಕ್ಕೆ ಈ ಹಿಟ್ಟನ್ನ ಸವರಿ. ಅದರ ಮೇಲೆ ಮತ್ತೊಂದು ಎಲೆ ಇರಿಸಿ ಅದಕ್ಕೂ ಈ ಹಿಟ್ಟು ಹಚ್ಚಿ. ಹೀಗೆ ಮಾಡುತ್ತ, ನಾಲ್ಕು ಎಲೆಗೆ ಹಿಟ್ಟನ್ನು ಸವರಿ. ಈಗ ಈ ಎಲೆಯನ್ನ ರೋಲ್ ಮಾಡಿ. ಇದನ್ನ ಚಕ್ರದ ರೀತಿ ರೌಂಡ್ ರೌಂಡ್ ಕತ್ತರಿಸಿ. ನಂತರ ಇದನ್ನ ಎಣ್ಣೆಯಲ್ಲಿ ಕರಿಯಿರಿ. ಈಗ ಪಾತ್ರಾ ರೆಡಿ.