ಬೇರು ಹಲಸಿನ ಕಾಯಿ ಸ್ಪೆಶಲ್, ಹುಳಿ ಮೇಲರ ರೆಸಿಪಿ..

ಅರ್ಧ ಬೇಸಿಗೆಗಾಲದಿಂದ ಅರ್ಧ ಮಳೆಗಾಲದವರೆಗೂ ಕೈಗೆಟಕುವ ತರಕಾರಿ ಅಂದ್ರೆ ಬೇರು ಹಲಸು. ಬೇರು ಹಲಸಿನಕಾಯಿಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಕರಾವಳಿ, ಮಲೆನಾಡು ಭಾಗದಲ್ಲಿ ಈ ತರಕಾರಿಯನ್ನ ಹೆಚ್ಚಾಗಿ ಬಳಸಲಾಗುತ್ತದೆ. ಬೇರು ಹಲಸಿನ ದೋಸೆ, ಫೋಡಿ, ತವ್ವಾ ಫ್ರೈ, ಚಿಪ್ಸ್, ಸಾಂಬಾರ್ ಇದೆಲ್ಲವನ್ನ ಮಾಡಿದ್ರೆ, ರೆಡಿಯಾದ ಅರ್ಧಗಂಟೆಯಲ್ಲಿ ಖಾಲಿಯಾಗಿ ಬಿಡತ್ತೆ.

ಅಷ್ಟು ರುಚಿಕರವಾಗಿರತ್ತೆ ಈ ಖಾದ್ಯಗಳು. ಹಾಗಾಗಿ ಇಂದು ನಾವು ಬೇರು ಹಲಸಿನಕಾಯಿಯ ಹೊಸ ರುಚಿಯನ್ನ ನಿಮಗಾಗಿ ತಂದಿದ್ದೇವೆ. ಅದೇ ಹುಳಿ ಮೇಲರ ರೆಸಿಪಿ. ಇದು ಡಿಫ್ರೆಂಟ್ ಆದ ಸಾಂಬಾರ್ ರೆಸಿಪಿ. ಅನ್ನ, ದೋಸೆ, ಚಪಾತಿ, ಇಡ್ಲಿ ಜೊತೆ ನೀವಿದನ್ನ ಸವಿಯಬಹುದು. ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ಕೊಬ್ಬರಿ ತುರಿ, ತುಂಡರಿಸಿದ ಒಂದು ಬೇರು ಹಲಸಿನಕಾಯಿ, ಒಂದು ಹಸಿ ಮೆಣಸಿನಕಾಯಿ, 20 ಎಸಳು ಕರಿ ಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರೆಣೆಗೆ ಎರಡು ಸ್ಪೂನ್ ಎಣ್ಣೆ, ಜೀರಿಗೆ, ಕರಿಬೇವು, ಒಣ ಮೆಣಸು, ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ.

ಮೊದಲು ಬೇರು ಹಲಸನ್ನು ಕುಕ್ಕರ್‌ನಲ್ಲಿ ಒಂದೇ ಒಂದು ಸಿಟಿಗೆ ಬೇಯಿಸಿ. ಇದು ಒಂದಕ್ಕಿಂತ ಹೆಚ್ಚು ಸಿಟಿಗೆ ಬೇಯಿಸಿದ್ದಲ್ಲಿ, ತುಂಬಾ ಬೆಂದು ರುಚಿ ಹಾಳಾಗುತ್ತದೆ. ಹೀಗೆ ಬೇರು ಹಲಸು ಬೇಯುವಾಗ, ಇದಕ್ಕೆ ಬೇಕಾದ ಮಸಾಲೆ ತಯಾರಿಸಿಕೊಳ್ಳಿ. ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹಸಿ ಮೆಣಸಿನಕಾಯಿ, ಕರಿಬೇವು, ಉಪ್ಪು ಕೊಂಚ ನೀರು ಹಾಕಿ, ರುಬ್ಬಿಕೊಳ್ಳಿ.

ಈಗ ಬೆಂದ ಬೇರು ಹಲಸಿನಕಾಯಿಗೆ ಈ ಮಸಾಲೆ ಮಿಶ್ರಣವನ್ನು ಸೇರಿಸಿ, ಕುದಿ ಬರುವವರೆಗೂ ಬೇಯಿಸಿ. ನಂತರ ಒಂದು ಒಗ್ಗರಣೆ ಸೌಟಿಗೆ ಎಣ್ಣೆ. ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಒಗ್ಗರಣೆ ಕೊಟ್ಟರೆ, ಬೇರು ಹಲಸಿನ ಹುಳಿ ಮೇಲರ ರೆಡಿ.

About The Author