Friday, October 18, 2024

Latest Posts

ಕರಿಬೇವು ಮತ್ತು ಹುರಿಗಡಲೆ ಚಟ್ನಿಪುಡಿ ರೆಸಿಪಿ..

- Advertisement -

ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ನಾವಿವತ್ತು ಕರಿಬೇವಿನ ಮತ್ತು ಪುಟಾಣಿ ಅಂದ್ರೆ ಹುರಿಗಡಲೆಯ ಚಟ್ನಿಪುಡಿ ಹೇಗೆ ತಯಾರು ಮಾಡೋದು ಅನ್ನೋದನ್ನ ಹೇಳಲಿದ್ದೇವೆ.

ಕರಿಬೇವಿನ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು ಕಪ್ ಕರಿಬೇವು, ಎರಡು ಸ್ಪೂನ್ ಎಣ್ಣೆ, ಅರ್ಧ ಕಪ್ ಪುಡಿ ಮಾಡಿದ ಒಣಕೊಬ್ಬರಿ, 10 ಒಣ ಮೆಣಸು, ಅರ್ಧ ಕಪ್ ಕಡಲೆ ಬೇಳೆ, ಕಾಲು ಕಪ್ ಉದ್ದಿನ ಬೇಳೆ, ಕಾಲು ಚಮಚ ಇಂಗು, ಚಿಕ್ಕ ತುಂಡು ಹುಣಸೆ ಹಣ್ಣು, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಒಂದು ಸ್ಪೂನ್ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇರಿಸಿ, ಎಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಕರಿಬೇವು ಹಾಕಿ, ಅದು ಗರಿ ಗರಿಯಾಗುವವರೆಗೂ ಹುರಿಯಿರಿ. ಇದಾದ ಬಳಿಕ, ಕರಿಬೇವನ್ನು ಬೇರೆ ಬಾಣಲೆಗೆ ಹಾಕಿ, ಅದೇ ಪ್ಯಾನ್‌ಗೆ ಕೊಬ್ಬರಿ ತುರಿ ಹಾಕಿ ಹುರಿಯಿರಿ. ಇದನ್ನೂ ಕರಿಬೇವಿಗೆ ಸೇರಿಸಿ. ನಂತರ ಮತ್ತೆ ಪ್ಯಾನ್‌ಗೆ ಎಣ್ಮೆ ಹಾಕಿ ಒಣಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್‌ಗೆ ಹುಣಸೆ ಹಣ್ಣು, ಕೊತ್ತೊಂಬರಿ ಕಾಳು, ಇಂಗು ಹಾಕಿ ಕೊಂಚ ಹುರಿಯಿರಿ, ನಂತರ ಇದಕ್ಕೆ ಮೊದಲೇ ಹುರಿದುಕೊಂಡ, ಕರಿಬೇವು, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸು ಎಲ್ಲವನ್ನೂ ಹಾಕಿ, ಒಮ್ಮೆ ಮಿಕ್ಸ್ ಮಾಡಿ, ನಂತರ ಉಪ್ಪು ಮತ್ತು ಸಕ್ಕರೆ ಸೇರಿಸಿ, ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿದ್ರೆ, ಕರಿಬೇವಿನ ಚಟ್ನಿಪುಡಿ ರೆಡಿ.

ಪುಟಾಣಿ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು ಕಪ್ ಹುರಿಗಡಲೆ, ಅರ್ಧ ಕಪ್ ಒಣಕೊಬ್ಬರಿ ತುರಿ, ಒಂದು ಸ್ಪೂನ್ ಅಚ್ಚ ಖಾರದ ಪುಡಿ, ಒಂದು ತುಂಡು ಹುಣಸೆ ಹಣ್ಣು, 40 ಕರಿಬೇವಿನ ಸೊಪ್ಪು, ಚಿಕ್ಕ ತುಂಡು ಬೆಲ್ಲ, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಒಂದು ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ, ಹುರಿಗಡಲೆ, ಕೊಬ್ಬರಿ ತುರಿ, ಕರಿಬೇವು, ಜೀರಿಗೆ, ಕೊತ್ತೊಂಬರಿ ಕಾಳು, ಒಂದೊಂದಾಗಿ ಹುರಿದುಕೊಳ್ಳಿ, ನಂತರ ಹುಣಸೆಹಣ್ಣನ್ನ ಪ್ಯಾನ್‌ಗೆ ಹಾಕಿ ಕೊಂಚ ಹುರಿದು ಅದಕ್ಕೆ ಉಳಿದೆಲ್ಲ ಹುರಿದ ಸಾಮಗ್ರಿ, ಬೆಲ್ಲ, ಉಪ್ಪು, ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ. ಈಗ ಇದನ್ನ ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿದ್ರೆ, ಹುರಿಗಡಲೆ ಚಟ್ನಿಪುಡಿ ರೆಡಿ.

- Advertisement -

Latest Posts

Don't Miss