ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾ ಕ್ರಿಕೆಟರ್ ಸುರೇಶ್ ರೈನಾ, ಶೀಘ್ರವಾಗಿ ಗುಣಮುಖವಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟೀಮ್ ಇಂಡಿಯಾ ಪರ 18 ಟೆಸ್ಟ್ ಸೇರಿದಂತೆ 226 ಏಕದಿನ ಹಾಗೂ 78 ಟಿ-ಟ್ವೆಂಟಿ ಪಂದ್ಯಗಳನ್ನಾಡಿರುವ ರೈನಾ, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಸಾಕಷ್ಟು ತಮಿಳು ಅಭಿಮಾನಿಗಳನ್ನು ಹೊಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯನ್ನು ತಲಾ ಅಂತನೇ ಕರೆಯುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು, ರೈನಾ ರನ್ನು ಪ್ರೀತಿಯಿಂದ ಚಿನ್ನಾ ತಲಾ ಅಂತಾನೇ ಕರೆಯುತ್ತಾರೆ. ಸದ್ಯ ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ರೈನಾ, ದೇಸಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ಮೊಣಕಾಲು ನೋವಿಗೆ ತುತ್ತಾಗಿದ್ದ ರೈನಾ, ನೆದರ್ ಲ್ಯಾಂಡ್ ನ ಆಮ್ಸ್ಟರ್ಡ್ಯಾಮ್ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಿನ್ನೆ ಈ ವಿಷಯವನ್ನು ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ನಂತರ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು, ರೈನಾ ಶೀಘ್ರವಾಗಿ ಚೇತರಿಕೆಯಾಗಲಿ ಅಂತ ಹಾರೈಸಿದ್ದಾರೆ.