ಮನುಷ್ಯ ಗಟ್ಟಿ ಮುಟ್ಟಾಗಿರಲು, ಉತ್ತಮ ಆಹಾರ ಸೇವಿಸುವುದು ತುಂಬಾ ಮುಖ್ಯ. ಆದರೆ ಕೆಲವು ಆರೋಗ್ಯಕರ ಆಹಾರವನ್ನ ಕೂಡ ನಾವು ರಾತ್ರಿ ಊಟದಲ್ಲಿ ಸೇವಿಸಬಾರದು. ಹಾಗೆ ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಹಾಗಾದ್ರೆ ನಾವು ರಾತ್ರಿ ಊಟ ಮಾಡುವ ವೇಳೆ ಯಾವ ಆಹಾರ ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಕೆಲವು ಆರೋಗ್ಯಕರ ಆಹಾರಗಳು, ಸೂರ್ಯಾಸ್ತವಾದ ಮೇಲೆ ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ. ಏಕೆಂದರೆ, ಸೂರ್ಯನ ರಶ್ಮಿ ಇರುವ ವೇಳೆ ನಾವು ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳಬಹುದು. ಆದರೆ ಇನ್ನು ಕೆಲವು ಆಹಾರಗಳನ್ನು ನಾವು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅಂಥ ಆಹಾರಗಳನ್ನು ನಾವು ರಾತ್ರಿ ಹೊತ್ತು ಸೇವಿಸಬಾರದು.
ಮೊದಲನೇಯದಾಗಿ ನೀರಿನಂಶ ಹೆಚ್ಚಿರುವ ಆಹಾರ. ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಸೌತೇಕಾಯಿ, ಎಳನೀರು, ನಿಂಬೆ ಜ್ಯೂಸ್, ಲಸ್ಸಿ, ಮೊಸರು ಇವುಗಳೆಲ್ಲವೂ ನೀರಿನಂಶ ಹೊಂದಿದ್ದಾಗಿದೆ. ಮೊಸರು ನೀರು ಬಿಡುತ್ತದೆ. ಇವುಗಳನ್ನೆಲ್ಲ ನಾವು ರಾತ್ರಿ ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಏಕೆಂದರೆ, ಇವನ್ನೆಲ್ಲ ಬೇಯಿಸಿಲ್ಲ, ಅಥವಾ ಅಗ್ನಿಯ ಸಹಾಯದಿಂದ ತಯಾರಾದ ಪದಾರ್ಥಗಳು ಇವಲ್ಲ. ಹಾಗಾಗಿ ಅಗ್ನಿಸ್ಪರ್ಶವಲ್ಲದ ಆಹಾರಗಳು ಇದಾಗಿದ್ದರಿಂದ, ಇದನ್ನು ರಾತ್ರಿ ಹೊತ್ತು ತಿನ್ನಬಾರದು.
ಎರಡನೇಯದಾಗಿ ಫ್ರಿಜ್‌ನಲ್ಲಿ ಇಟ್ಟ ಆಹಾರಗಳು. ಅಥವಾ ಐಸ್ ಬೆರೆಸಿದ ಆಹಾರಗಳನ್ನ ರಾತ್ರಿ ಹೊತ್ತು ತಿನ್ನಬಾರದು. ಭಾರತೀಯ ಆಹಾರ ಪದ್ಧತಿಯ ಪ್ರಕಾರ, ಫ್ರಿಜ್ ಬಳಸುವುದೇ ತಪ್ಪು. ಅದರಲ್ಲಿರಿಸಿದ ಆಹಾರ ಬಳಸುವುದೇ ತಪ್ಪು. ಆದರೆ ಈಗಿನ ಕಾಲದಲ್ಲಿ, ಪತಿ- ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ತಂದ ತರಕಾರಿ, ಹಲವು ದಿನಗಳವರೆಗೆ ಕೆಡದೇ, ಫ್ರಿಜ್‌ನಲ್ಲಿರಲಿ. ದೋಸೆ, ಇಡ್ಲಿಯ ಹಿಟ್ಟೆಲ್ಲ ಕೆಡದಿರಲಿ. ಹೀಗೆ ಅನೇಕ ಕಾರಣಗಳಿಂದ, ಫ್ರಿಜ್ ಬಳಸಲಾಗುತ್ತಿದೆ. ಆದರೆ ನೀವು ಫ್ರಿಜ್ ಬಳಸಿದರೂ ಕೂಡ, ಅದರಲ್ಲಿಟ್ಟ ಆಹಾರವನ್ನು ಬಿಸಿ ಮಾಡದೇ ತಿನ್ನಬೇಡಿ. ಮತ್ತು ರಾತ್ರಿ ಐಸ್ ಬಳಸಿದ ಜ್ಯೂಸ್, ನೀರು, ಹಾಲು, ಐಸ್‌ಕ್ರೀಮ್ ಎಲ್ಲ ಸೇವಿಸಬೇಡಿ. ಇದರಿಂದ ನಿಮ್ಮ ಹಲ್ಲಿನ ಆರೋಗ್ಯ ಹಾಳಾಗುವುದಲ್ಲದೇ, ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.
ಮೂರನೇಯದಾಗಿ ದೇಹಕ್ಕೆ ತಂಪಾಗಿರುವ ಆಹಾರವನ್ನ ರಾತ್ರಿ ಹೊತ್ತು ಸೇವಿಸಬಾರದು. ಉದಾಹರಣೆಗೆ, ಬಾಳೆಹಣ್ಣು, ಮೊಸರು, ಕಿತ್ತಳೆ, ದ್ರಾಕ್ಷಿ, ಚಿಕ್ಕು, ಮಸ್ಕ್‌ಮೆಲನ್ ಹೀಗೆ ಇಂಥ ಹಣ್ಣುಗಳ ಸೇವನೆ ಮಾಡಬಾರದು. ಶರ್ಬತ್, ಜ್ಯೂಸ್, ಇವಲ್ಲೆವನ್ನೂ ರಾತ್ರಿ ಸೇವಿಸುವಂತಿಲ್ಲ.
ನಾಲ್ಕನೇಯದಾಗಿ ಬೇಗ ಜೀರ್ಣವಾಗದ ಆಹಾರವನ್ನು ರಾತ್ರಿ ಸೇವಿಸಬಾರದು. ಬರ್ಗರ್, ಫ್ರೆಂಚ್ ಫ್ರೈಸ್, ಪಿಜ್ಜಾ, ಮೈದಾದಿಂದ ತಯಾರಿಸಿದ ಆಹಾರವನ್ನ ರಾತ್ರಿ ಸೇವಿಸಬಾರದು. ಇವೆಲ್ಲವನ್ನೂ ನಾವು ಎಂದಿಗೂ ಸೇವಿಸಲೇಬಾರದು. ಆದರೂ ಕೆಲವರು, ರುಚಿಗಾಗಿ ಸೇವಿಸುತ್ತಾರೆ. ಅಂಥವರು ಇವನ್ನೆಲ್ಲ ರಾತ್ರಿ ಹೊತ್ತು ಎಂದಿಗೂ ಸೇವಿಸಬೇಡಿ.
ಐದನೇಯದಾಗಿ ನಿಮಗೆ ಎಷ್ಟು ಹಸಿವಾಗುತ್ತಿದೆಯೋ, ಅದಕ್ಕಿಂತ ಕೊಂಚ ಕಡಿಮೆಯೇ ಆಹಾರ ಸೇವಿಸಿ ಹೊರತು, ಹಸಿವಾಗುತ್ತಿರುವುದಕ್ಕಿಂತ ಹೆಚ್ಚು ಸೇವಿಸಲೇಬೇಡಿ. ಉದಾಹರಣೆಗೆ 3 ಚಪಾತಿ ತಿಂದರೆ, ನಿಮ್ಮ ಹೊಟ್ಟೆ ತುಂಬಿ ಹೋಗುತ್ತದೆ ಅಂತಾದಲ್ಲಿ, 2ವರೆ ಚಪಾತಿ ತಿನ್ನಿ. ಅದನ್ನು ಬಿಟ್ಟು 4 ಚಪಾತಿ ತಿನ್ನಬೇಡಿ. ಹೀಗೆ ಅಗತ್ಯಕ್ಕಿಂತ ಹೆಚ್ಚು ತಿಂದು, ರಾತ್ರಿ ಮಲಗಿದರೆ, ನಿಮ್ಮ ದೇಹದ ತೂಕ, ಅನಾರೋಗ್ಯಕರವಾಗಿ ಹೆಚ್ಚುತ್ತದೆ.