Spiritual News: ಭಾರತದಲ್ಲಿ ಮಡಿಯನ್ನು ಹಾಗೆ ಇರಿಸಿಕೊಂಡು ಬಂದ ಪ್ರಸಿದ್ಧ ದೇವಸ್ಥಾನವೆಂದರೆ ಶಬರಿ ಮಲೆ ಐಯ್ಯಪ್ಪ ದೇವಸ್ಥಾನ. ಅಯ್ಯಪ್ಪ ದೇವಸ್ಥಾನದಲ್ಲಿ 18 ಮೆಟ್ಟಿಲುಗಳಿದೆ. ಇದನ್ನು ಹತ್ತಿದಾಗ, ಅಯ್ಯಪ್ಪನಿರುವ ಗರ್ಭಗುಡಿ ಕಾಣಸಿಗುತ್ತದೆ. ಆ 18 ಮೆಟ್ಟಿಲುಗಳಿಗೂ ಅರ್ಥವಿದೆ. ಹಾಗಾದ್ರೆ 18 ಮೆಟ್ಟಿಲುಗಳಿಗಿರುವ ಅರ್ಥವೇನು ಅಂತಾ ತಿಳಿಯೋಣ ಬನ್ನಿ..
ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು ಪ್ರತಿನಿಧಿಸುತ್ತದೆ. ಕಣ್ಣು, ಕಿವಿ, ಮೂಗು, ನಾಲಿಗೆ, ಸ್ಪರ್ಶ. ಇದರ ಅರ್ಥವೇನೆಂದರೆ, ಒಳ್ಳೆಯದ್ದನ್ನೇ ನೋಡಬೇಕು. ಒಳ್ಳೆಯದನ್ನೇ ಕೇಳಬೇಕು. ಒಳ್ಳೆಯದನ್ನೇ ಮಾತನಾಡಬೇಕು. ಮೂಗು ಶುದ್ಧ ಗಾಳಿಯನ್ನ ಸೇವಿಸಬೇಕು. ಮನುಷ್ಯ ದೇವರಿಗೆ ಸಂಬಂಧಿಸಿದ ಪವಿತ್ರ ವಸ್ತು, ಜಪ ಮಾಲೆಗಳ ಸ್ಪರ್ಶವನ್ನೇ ಮಾಡಬೇಕು ಎಂಬುದೇ ಇದರ ಅರ್ಥ.
8 ಮೆಟ್ಟಿಲುಗಳು ಅಷ್ಟರಾಗಗಳನ್ನ ಸೂಚಿಸುತ್ತದೆ. ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ, ಅಸೂಯೆ ಮತ್ತು ಹೆಗ್ಗಳಿಕೆ ಇವುಗಳ ಸಂಕೇತವಾಗಿದೆ. ಮೂರು ಮೆಟ್ಟಿಲುಗಳು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳ ಸಂಕೇತ. ಉಳಿದ 2 ಮೆಟ್ಟಿಲುಗಳು ವಿದ್ಯೆ ಮತ್ತು ಅಜ್ಞಾನದ ಸಂಕೇತ. ಈ ಮೆಟ್ಟಿಲುಗಳನ್ನು ಪಂಚಲೋಹಗಳಿಂದ ಮಾಡಲಾಗಿದೆ.
ಎಲ್ಲರಿಗೂ ತಿಳಿದಿರುವ ಹಾಗೆ, ಈ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ಅಯ್ಯಪ್ಪನ ದರ್ಶನ ಮಾಡಬಯಸುವ ಪುರುಷರು, 41 ದಿನ ಕಠಿಣ ವೃತ ಮಾಡಬೇಕು. ಮಾಂಸಾಹಾರ, ಮದ್ಯ ಸೇವನೆ, ಪತ್ನಿಯ ಸಂಪರ್ಕ, ಮನೆ ಎಲ್ಲವನ್ನೂ ತೊರೆದು, ಮಾಲಾಧಾರಿಗಳಾಗಿ, ಅಯ್ಯಪ್ಪನ ಸನ್ನಿಧಾನದಲ್ಲೇ ಊಟ, ಉಪಚಾರ ಮಾಡಬೇಕು. ಸದಾ ಅಯ್ಯಪ್ಪನನ್ನು ಧ್ಯಾನಿಸಬೇಕು. ಮಡಿಯಿಂದಿರಬೇಕು. ಇದಾದ ಬಳಿಕ, ಶಬರಿಮಲೆಗೆ ಬಂದು, ಅಯ್ಯಪ್ಪನ ದರ್ಶನ ಮಾಡಬೇಕು.