Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅದರಲ್ಲೂ ಮದುವೆ ಮಾಡುವಾಗ ಹಲವಾರು ಪದ್ಧತಿಗಳನ್ನು ಅನುಸರಿಸಲೇಬೇಕಾಗುತ್ತದೆ. ಅದರಲ್ಲಿ ಗೋತ್ರ ನೋಡಿ ಮದುವೆಯಾಗುವುದು. ಸಪ್ತ ಋಷಿಗಳ ಹೆಸರು ಈ ಗೋತ್ರಗಳಿಗಿದೆ. ಒಂದೇ ಗೋತ್ರದ ಹುಡುಗ- ಹುಡುಗಿಯನ್ನು ಎಂದಿಗೂ ಮದುವೆ ಮಾಡಲಾಗುವುದಿಲ್ಲ. ಅದು ಪ್ರೇಮ ವಿವಾಹವಾದರೂ ಸರಿ. ಹಾಗಾದ್ರೆ ಒಂದೇ ಗೋತ್ರದಲ್ಲಿ ವಿವಾಹವಾಗಬಾರದು ಅಂತಾ ಹೇಳುವುದು ಯಾಕೆ..?
7 ಋಷಿಗಳ ಗೋತ್ರಗಳು ವಂಶಸ್ಥರ ರೂಪದಲ್ಲಿದೆ. ಕಶ್ಯಪ, ವಿಶ್ವಾಮಿತ್ರ, ಅತ್ರಿ, ಅಂಗೀರಸ, ಭೃಗು, ಗೌತಮ, ಭಾರಧ್ವಾಜ. ಇವರು ಸಪ್ತಋಷಿಗಳು. ಇವರ ಹೆಸರಲ್ಲೇ ಗೋತ್ರವಿದೆ. ಒಂದೇ ಗೋತ್ರವಿರುವವರು ಎಂದರೇ, ಒಂದೇ ವಂಶಸ್ಥರು ಎಂದರ್ಥ. ಅಂದಮೇಲೆ ಒಂದೇ ಗೋತ್ರದವರು, ಸಹೋದರ, ಸಹೋದರಿಯ ಸಮಾನರಾಗಿರುತ್ತಾರೆ.
ಹಠ ಮಾಡಿ, ಅಥವಾ ಬೇರೆ ದಾರಿ ಇಲ್ಲದೇ, ಒಂದೇ ಗೋತ್ರದವರು ವಿವಾಹವಾದರೆ, ಅಂಥವರಿಗೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೇ, ಅವರಿಗೆ ಮಕ್ಕಳು ಹುಟ್ಟಿದರೂ, ದೈಹಿಕ- ಮಾನಸಿಕ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣವೇನು ಎಂದರೆ, ದೂರದ ಸಂಬಂಧಿಕರಾಗಿದ್ದರೂ, ರಕ್ತ ಸಂಬಂಧಿಕರಾಗಿರುತ್ತಾರೆ.
ಅಲ್ಲದೇ, ಒಂದು ವಂಶಕ್ಕೆ ಏನಾದರೂ ಶಾಪ, ರೋಗ, ದೋಷಗಳಿದ್ದರೆ, ಅದು ಮುಂದಿನ ಪೀಳಿಗೆಗೂ ಅಂಟಬಹುದು. ಹಾಗೆ ಆಗಬಾರದು ಎಂದರೆ, ಬೇರೆ ಬೇರೆ ಗೋತ್ರದಲ್ಲಿ ವಿವಾಹ ಮಾಡಬೇಕು. ಇದರಿಂದ ಜೀವನದ ಜೊತೆ, ದಾಂಪತ್ಯ ಜೀವನವೂ ಉತ್ತಮವಾಗಿರುತ್ತದೆ. ಮಕ್ಕಳು ಆರೋಗ್ಯವಾಗಿ ಇರುತ್ತಾರೆ.