Spiritual: ಗಣೇಶ ಮತ್ತು ಕಾರ್ತೀಕೆಯ ಇಬ್ಬರೂ ವಾಯುವಿಹಾರಕ್ಕೆಂದು ಹೋಗುತ್ತಾರೆ. ಹಾಗೆ ಹೋದಾಗ ಇಬ್ಬರಿಗೂ ಒಂದು ಮರದಲ್ಲಿರುವ ಒಂದೇ ಒಂದು ಹಣ್ಣು ಕಣ್ಣಿಗೆ ಬೀಳುತ್ತದೆ. ಇಬ್ಬರೂ ಒಂದೇ ಸಲ ಆ ಫಲವನ್ನು ಹಿಡಿಯುತ್ತಾರೆ. ಅವರಿಬ್ಬರು ಮೊದಲು ತಾನು ಆ ಹಣ್ಣನ್ನು ನೋಡಿದ್ದು ಮತ್ತು ಕಿತ್ತಿದ್ದು ಎಂದು ವಾದ ಮಾಡುತ್ತಾರೆ. ಆಗ ಇಬ್ಬರೂ ಸೇರಿ, ತಂದೆ ತಾಯಿಯ ಬಳಿ ಹೋಗಿ, ಈ ಬಗ್ಗೆ ಸಲಹೆ ಕೇಳೋಣವೆಂದು ನಿರ್ಧರಿಸುತ್ತಾರೆ.
ಇಬ್ಬರೂ ಹೋಗಿ ಇರುವ ವಿಷಯವನ್ನು ಶಿವ ಮತ್ತು ಪಾರ್ವತಿಯ ಬಳಿ ಕೇಳಿದಾಗ, ಅವರು ಇಬ್ಬರಿಗೂ ಒಂದು ಕೆಲಸವನ್ನು ಮಾಡಲು ಹೇಳುತ್ತಾರೆ. ಯಾರು ಬುದ್ಧಿವಂತಿಕೆಯಿಂದ ಆ ಕೆಲಸವನ್ನು ಮಾಡುತ್ತಾರೋ, ಅವರಿಗೆ ಹಣ್ಣು ಸಿಗುತ್ತದೆ ಎಂದು ಹೇಳುತ್ತಾರೆ. ಏನು ಆ ಕೆಲಸವೆಂದು ಕೇಳಿದಾಗ, ನೀವಿಬ್ಬರೂ ಪ್ರಪಂಚವನ್ನು ಸುತ್ತಿ ಬರಬೇಕು. ಯಾರು ಮೊದಲು ಪ್ರಪಂಚವನ್ನು ಸುತ್ತಿ ಬರುತ್ತಾರೋ, ಅವರಿಗೆ ಈ ಹಣ್ಣನ್ನು ನಾವು ಕೊಡುತ್ತೇವೆ ಎನ್ನುತ್ತಾರೆ.
ಇವರ ಮಾತನ್ನು ಕೇಳಿದ ಸುಬ್ರಹ್ಮಣ್ಯ, ತಾನೇ ಮೊದಲು ಪ್ರಪಂಚವನ್ನು ಸುತ್ತಿ ಬಂದು, ಈ ಹಣ್ಣನ್ನು ಪಡೆಯಬೇಕು ಎಂದು ನಿರ್ಧರಿಸಿ, ತನ್ನ ವಾಹನವಾದ ನವಿಲನ್ನೇರಿ ಹೊರಡುತ್ತಾನೆ. ಆದರೆ ಬುದ್ಧಿವಂತ ಗಣೇಶ ಮಾತ್ರ, ಅಪ್ಪ ಅಮ್ಮನಾದ ಶಿವ ಪಾರ್ವತಿಗೆ ಸುತ್ತು ಹಾಕುತ್ತಾನೆ. ಬಳಿಕ ಬಂದು ನಿಂತು ನಮಸ್ಕರಿಸುತ್ತಾ, ನಾನೇ ಮೊದಲು ಪ್ರಪಂಚವನ್ನು ತಿರುಗಿದ್ದು ಎಂದು ಹೇಳುತ್ತಾನೆ.
ಈ ಮಾತಿನ ಅರ್ಥವನ್ನು ಕೇಳಿದಾಗ, ನನ್ನ ಅಪ್ಪ ಅಮ್ಮನೇ ನನ್ನ ಪ್ರಪಂಚ. ಹಾಗಾಗಿ ನಾನು ನಿಮ್ಮನ್ನೇ ಸುತ್ತಿದೆ ಎಂಬ ಬುದ್ಧಿವಂತಿಕೆಯ ಮಾತನ್ನಾಡುತ್ತಾನೆ. ಗಣಪನ ಮಾತನ್ನು ಕೇಳಿ ಶಿವ- ಪಾರ್ವತಿಗೆ ಆನಂದವಾಗುತ್ತದೆ. ದೇವತೆಗಳಿಗೂ ಗಣಪನ ಬುದ್ಧಿವಂತಿಕೆ ಇಷ್ಟವಾಗುತ್ತದೆ. ಈ ಮೂಲಕ ಗಣಪ, ಆ ಹಣ್ಣನ್ನ ತನ್ನದಾಗಿಸಿಕೊಳ್ಳುತ್ತಾನೆ.