Spiritual: ದಾಂಪತ್ಯ ಅನ್ನೋದು ಹೆಣ್ಣಿಗಾಗಲಿ, ಗಂಡಿಗಾಗಲಿ ಎರಡನೇಯ ಜೀವನವಿದ್ದಂತೆ. ಮದುವೆಗೂ ಮುನ್ನ ಇಬ್ಬರೂ ತಮ್ಮ ಮನಸ್ಸಿಗೆ ಬಂದ ಹಾಗೆ ಇರುತ್ತಾರೆ. ಇಬ್ಬರಲ್ಲೂ ಹುಡುಗ ಬುದ್ಧಿ ಇರುತ್ತದೆ. ಜವಾಬ್ದಾರಿ ಇರುವುದಿಲ್ಲ. ಆದರೆ ಮದುವೆಯಾದ ಮೇಲೆ ಜೀವನವೇ ಬದಲಾಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಜಗಳಗಳಾಗುತ್ತದೆ. ಆದರೆ ಅವುಗಳನ್ನೆಲ್ಲ ತಾಳ್ಮೆಯಿಂದ ನಿಭಾಯಿಸಬೇಕು. ಉತ್ತಮ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಅಹಂಕಾರದಿಂದಿರುವುದು. ಮೊದಲು ಅವಳೇ ಅಥವಾ ಅವನೇ ಮಾತನಾಡಲಿ ಎಂದು ಸುಮ್ಮನಿರುವುದು. ಇದೇ ಪತಿ ಪತ್ನಿ ದೂರವಾಗಲು ಇರುವ ಪ್ರಮುಖ ಕಾರಣ. ಜಗಳವಾದಾಗ, ಕೆಲ ಸಮಯದಲ್ಲೇ ಅದನ್ನು ಸರಿಪಡಿಸಿಕೊಳ್ಳಬೇಕು. ಮೊದಲು ಅವನೇ ಬಂದು ಕ್ಷಮೆ ಕೇಳಲಿ. ಅಥವಾ ಮೊದಲು ಅವಳೇ ಬಂದು ಮಾತನಾಡಿಸಲಿ ಎನ್ನುವ ಅಹಂಕಾರ ಇಬ್ಬರಿಗೂ ಇರಬಾರದು. ಎಷ್ಟೋ ಜನರ ಮದುವೆ ಇದೇ ಕಾರಣಕ್ಕೆ ಮುರಿದು ಬಿದ್ದಿದೆ.
ಎರಡನೇಯ ತಪ್ಪು ಪರಸ್ಪರ ಗೌರವ ನೀಡದೇ ಇರುವುದು. ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಅಂದರೆ, ಮೊದಲು ಇಬ್ಬರೂ ಪರಸ್ಪರ ಗೌರವಿಸಬೇಕು. ಇತರರ ಎದುರಿಗೆ ಅಥವಾ ಮನೆ ಜನರ ಎದುರಿಗೆ ಒಬ್ಬರಿಗೊಬ್ಬರು ಕೆಟ್ಟದಾಗಿ ತಮಾಷೆ ಮಾಡಿಕೊಳ್ಳುವುದು. ಅಥವಾ ಅವಮಾನ ಮಾಡುವುದೆಲ್ಲ ಮಾಡಿದಾಗ, ಇರುವ ಗೌರವ ಹೊರಟು ಹೋಗುತ್ತದೆ. ಹಾಗಾಗಿ ನಿಮ್ಮ ಜಗಳ, ತಮಾಷೆ, ಅವಮಾನವೆಲ್ಲವೂ ನಾಲ್ಕು ಗೋಡೆ ಮಧ್ಯೆ ಇರಬೇಕು ಹೊರತು, ಹೊರಗಲ್ಲ.
ಮೂರನೇಯ ತಪ್ಪು ಮನೆಯವರನ್ನು ಗೌರವಿಸದೇ ಇರುವುದು. ಪತ್ನಿಯಾದವಳು, ಪತಿಯ ತಾಯಿ, ತಂಗಿಗೆ ಬೈಯ್ಯುವುದು. ಅವರ ಬಗ್ಗೆ ಚಾಡಿ ಹೇಳುವುದು. ಪತಿಯಾದವನು ಪತತ್ನಿಯ ಅಪ್ಪ, ಅಣ್ಣನನ್ನು ಹೀಯಾಳಿಸುವುದು. ಆರ್ಥಿಕ ಪರಿಸ್ಥಿತಿಯ ಬಗ್ಗೆ ತಮಾಷೆ ಮಾಡುವುದು. ಇದೆಲ್ಲ ಹಲವರ ಮನೆಯಲ್ಲಿ ನಡೆಯುವ ಘಟನೆಗಳು. ಹೀಗೆ ಮಾಡಿದಾಗ, ಸಂಬಂಧ ಹಾಳಾಗುತ್ತದೆ.
ನಾಲ್ಕನೇಯ ತಪ್ಪು ಪತಿ-ಪತ್ನಿ ಮಧ್ಯೆ ನಡೆಯುವ ಜಗಳವನ್ನು ಇತರರ ಮುಂದೆ ವಿವರಿಸುವುದು. ಇದು ದೊಡ್ಡ ತಪ್ಪು. ಏಕೆಂದರೆ, ಇಂದು ಜಗಳ ನಡೆಯುತ್ತದೆ. ಮಾತು-ಕತೆಯಾಗುತ್ತದೆ. ಆದರೆ ನಾಳೆ ನೀವು ಸರಿಯಾಗುವಿರಿ. ಪ್ರೀತಿ ಮತ್ತೆ ಹುಟ್ಟುತ್ತದೆ. ಆದರೆ ನೀವು ಜಗಳವಾದಾಗ, ಇನ್ನೊಬ್ಬರ ಬಳಿ ಹೇಳಿದ ಚಾಡಿ ಮಾತು ಮಾತ್ರ ಹಾಗೇ ಉಳಿಯುತ್ತದೆ. ಅವರು ಹೀಗೆ ಎಲ್ಲರಿಗೂ ಹೇಳುತ್ತ, ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೆ. ಹಾಗಾಗಿ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ, ನೀವು ಈ ತಪ್ಪುಗಳನ್ನು ಮಾಡಬಾರದು.




