Spiritual: ಪತಿ-ಪತ್ನಿಯಾಗೋದು, ಒಬ್ಬರ ಕುಟುಂಬದೊಂದಿಗೆ ಸಂಬಂಧ ಬೆಳೆಸಿ, ಆ ಕುಟುಂಬವೂ ನಮ್ಮದು ಅಂತಾ ಹೇಳೋದು ಸುಲಭದ ವಿಷಯವಲ್ಲ. ಹಾಗಾಗಿಯೇ ಸಂಬಂಧ ಬೆಳೆಸುವಾಗ, ಕೆಲವು ವಿಚಾರಣೆಗಳನ್ನು ಕೂಡ ಮಾಡಲಾಗುತ್ತದೆ. ಹೆಣ್ಣಿನ ಸ್ವಭಾವ ಹೇಗಿದೆ..? ಗಂಡಿಗೆ ಕುಡಿಯುವ, ಧೂಮಪಾನ ಮಾಡುವ ಚಟ ಸೇರಿ, ಇನ್ಯಾವುದಾದರೂ ಚಟವಿದೆಯಾ..? ಹೀಗೆ ಹಲವಾರು ವಿಚಾರಣೆಗಳನ್ನು ನಡೆಸಿ, ಸಂಬಂಧ ಬೆಳೆಸಲಾಗುತ್ತದೆ. ಈ ಬಗ್ಗೆ ಚಾಣಕ್ಯರು ಕೂಡ, ಕೆಲ ವಿಷಯಗಳನ್ನು ಹೇಳಿದ್ದಾರೆ. ಹಾಗಾದರೆ, ಸಂಬಂಧ ಮಾಡುವ ಮುನ್ನ ಯಾವ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ ಗುಣ. ಜೀವನ ಸಂಗಾತಿಯಾಗುವವರ ಗುಣ ಮತ್ತು ಅವರ ಮನೆಜನರ ಗುಣ ಎಂಥದ್ದು ಅಂತಾ ತಿಳಿದುಕೊಳ್ಳುವುದು ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಮುಖ್ಯವಾಗಿರುತ್ತದೆ. ಏಕೆಂದರೆ ಗುಣ ಉತ್ತಮವಾಗಿದ್ದಾಗ ಮಾತ್ರ, ಜೀವನ ನಡೆಸಲು ಸಾಧ್ಯವಾಗುತ್ತದೆ. ಪತಿ ಅಥವಾ ಪತ್ನಿಗಲ್ಲದೇ, ಅವರ ಮನೆಜನರ ಗುಣವೂ ಕೆಟ್ಟದ್ದಾಗಿ, ಅಥವಾ ಹೊಟ್ಟೆಕಿಚ್ಚಿನ ಸ್ವಭಾವವಿದ್ದರೆ, ಅದು ಪತಿ-ಪತ್ನಿಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇಬ್ಬರ ಗುಣ ಮತ್ತು ಅವರ ಮನೆಯವರ ಗುಣ ಉತ್ತಮವಾಗಿರುವುದು ತುಂಬಾ ಮುಖ್ಯ.
ಎರಡನೇಯ ವಿಷಯ ಕೆಲಸ. ಈ ಕಾಲದಲ್ಲಿ ಹೆಣ್ಣಾದವಳು ದುಡಿಯುವುದು ಸಾಮಾನ್ಯವಾಗಿದೆ. ಏಕೆಂದರೆ, ಆಕೆ ತನ್ನ ಖರ್ಚಿಗಾಗುವಷ್ಟಾದರೂ ತಾನು ದುಡಿಯಬೇಕು. ಪತಿಯ ಎದುರು ಕೈ ಚಾಚಬಾರದು ಎಂಬ ಕಾರಣಕ್ಕೆ ದುಡಿಯುತ್ತಾಳೆ. ಆದರೆ, ಪುರುಷನಿಗೆ ಒಂದು ಉತ್ತಮ ಕೆಲಸವಿರಲೇಬೇಕು. ಆಗಲೇ ಪತ್ನಿಗೆ ಕೆಲಸವಿಲ್ಲದಿದ್ದಾಗಲೂ, ಆತ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ.
ಮೂರನೇಯ ವಿಷಯ ಚರಿತ್ರೆ. ಅಂದರೆ, ಅವರು ಈ ಹಿಂದೆ ಹೇಗಿದ್ದರು. ಪರ ಪುರುಷ- ಪರಸ್ತ್ರೀ ಸಂಬಂಧವಿರುವ ಬಗ್ಗೆ. ಅದನ್ನು ಸಂಪೂರ್ಣವಾಗಿ ಬಿಟ್ಟು ನಿಮ್ಮ ಬಳಿ ಬಂದಿದ್ದಾರೆಯೇ..? ಅಥವಾ ಆ ಸಂಬಂಧ ಹಾಗೆ ಇದೆಯೇ..? ಅಥವಾ ಜೀವನ ಸಂಗಾತಿಗೆ ಮೋಸ ಮಾಡುವ ಸ್ವಭಾವ ಅವರಿಗಿದೆಯೇ, ಅನ್ನೋ ಬಗ್ಗೆ ವಿಚಾರಿಸಬೇಕು. ಇದು ಎದುರಿನವರ ಮನಸ್ಸಿಗೆ ಬೇಸರ ತಂದರೂ, ಈ ಬಗ್ಗೆ ವಿಚಾರಿಸುವುದು ತುಂಬಾ ಮುಖ್ಯ.
ನಾಲ್ಕನೇಯ ವಿಷಯ ಸ್ವಾರ್ಥಿಯೋ, ತ್ಯಾಗಿಯೋ ಎಂದು ನೋಡಿ. ಓರ್ವ ಮನುಷ್ಯನಿಗೆ ತ್ಯಾಗದ ಗುಣ, ದಾನದ ಗುಣವಿರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ, ಕಷ್ಟದಲ್ಲಿರುವವರಿಗೆ ದಾನ ಮಾಡುವ, ಇನ್ನೊಬ್ಬರಿಗಾಗಿ ಸಣ್ಣ ಪುಟ್ಟ ತ್ಯಾಗವಾದರೂ ಮಾಡುವ ಗುಣವಿರಬೇಕು. ಇಂಥ ನೀವು ವಿವಾಹವಾಗುವ ಹೆಣ್ಣು ಅಥವಾ ಗಂಡಿನಲ್ಲಿ ಇಲ್ಲವೆಂದಲ್ಲಿ, ಅಂಥವರು ನಿಮ್ಮ ಮನೆಯ ಮರ್ಯಾದೆ ಕಾಪಾಡುತ್ತಾರೆ. ಅಥವಾ ನಿಮ್ಮ ಕಷ್ಟಕಾಲಕ್ಕೆ ಆಗುತ್ತಾರೆ ಅನ್ನೋದು ಸುಳ್ಳು. ಹಾಗಾಗಿ ನಿಮ್ಮ ಜೀವನ ಸಂಗಾತಿಯಾಗುವವರಿಗೆ ಉತ್ತಮ ಸ್ವಭಾವ, ನಿಸ್ವಾರ್ಥ ಸ್ವಭಾವವಿರುವುದು ತುಂಬಾ ಮುಖ್ಯ.