ಹಿಂದೂ ಧರ್ಮದಲ್ಲಿ ಹಲವಾರು ಗಿಡ ಮರಗಳಿಗೆ ನಾವು ಧಾರ್ಮಿಕ ಸ್ಥಾನವನ್ನ ನೀಡಿದ್ದೇವೆ. ಅವದುಂಬರ ವೃಕ್ಷ, ಕಲ್ಪವೃಕ್ಷ, ಆಲದ ಮರ, ಅರಳಿ ಮರ, ಹೀಗೆ ಹಲವಾರು ಮರಕ್ಕೆ ನಾವು ಪೂಜಿಸುತ್ತೇವೆ. ಅಂತೆಯೇ ತುಳಸಿಗೂ ಕೂಡ ಸನಾತನ ಧರ್ಮದಲ್ಲಿ ಉನ್ನತ ಮಹತ್ವವಿದೆ. ಇಂದು ನಾವು ಮನೆಯಲ್ಲಿ ತುಳಸಿ ಗಿಡ ಏಕೆ ಬೆಳೆಸಬೇಕು, ತುಳಸಿಯಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ..
ತುಳಸಿ ಗಿಡದಲ್ಲಿ ದೈವಿಕ ಶಕ್ತಿ ಇರುವ ಕಾರಣಕ್ಕೆ ಇದನ್ನ ಮನೆಯಲ್ಲಿ ನೆಡಬೇಕು ಎಂದು ಹೇಳಲಾಗುತ್ತದೆ. ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನ ದೇವಿಯಾಗಿ ಪೂಜಿಸಲಾಗುತ್ತದೆ. ಯಾಕಂದ್ರೆ ಇದರಲ್ಲಿ ಧನಾತ್ಮಕ ಶಕ್ತಿ ಹೆಚ್ಚಿದ್ದು, ಇದರಿಂದ ಯಾವುದೇ ದುಷ್ಟ ಶಕ್ತಿಗಳು ಮನೆಯ ಅಕ್ಕ ಪಕ್ಕ ಸುಳಿಯಲಾರವು ಎಂಬ ನಂಬಿಕೆ ಇದೆ. ಇನ್ನು ತುಳಸಿ ಗಿಡವನ್ನ ಮುಟ್ಟಾದ ಹೆಣ್ಣು ಮಕ್ಕಳು ಮುಟ್ಟಬಾರದು, ಮುಟ್ಟಿದರೆ ಬಾಡಿ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಅಲ್ಲದೇ ರವಿವಾರವೂ ಕೂಡ ತುಳಸಿಯನ್ನ ಮುಟ್ಟಬಾರದಂತೆ. ಯಾಕಂದ್ರೆ ಈ ಎರಡೂ ಸಮಯದಲ್ಲಿ ದೇಹದಲ್ಲಿ ಉಷ್ಣದ ಪ್ರಮಾಣ ಹೆಚ್ಚಾಗಿದ್ದು, ತುಳಸಿಯ ಪ್ರಕೃತಿಯೂ ಉಷ್ಣವಾಗಿರುತ್ತದೆ. ಹಾಗಾಗಿ ನಾವು ತುಳಸಿ ಗಿಡವನ್ನ ಮುಟ್ಟಿದ್ರೆ, ಅದರ ಉಷ್ಣದ ಜೊತೆ ನಮ್ಮ ದೇಹದ ಉಷ್ಣಾಂಶ ಸೇರಿ, ಗಿಡ ಬಾಡುತ್ತದೆ ಅನ್ನೋದು ವೈಜ್ಞಾನಿಕ ಸತ್ಯ.
ಇನ್ನು ತುಳಸಿಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಪ್ರತಿದಿನ ಒಂದರಿಂದ ಎರಡು ತುಳಸಿ ಎಲೆಯನ್ನು ತಿನ್ನುವುದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ತಲೆಬಿಸಿ, ಕೆಲಸ ಮಾಡುವವರಿಗೆ ಆಫೀಸಿನ ತಲೆಬಿಸಿ ಮತ್ತು ಮಹಿಳೆಯರಿಗೆ ಮನೆಕೆಲಸದ ತಲೆಬಿಸಿ. ಇಂಥವರೆಲ್ಲ ಪ್ರತಿದಿನ ಒಂದೆರಡು ತುಳಸಿ ಎಲೆ ಸೇವಿಸಿದರೆ ಒಳ್ಳೆಯದು.
ಇನ್ನು ಪ್ರತಿದಿನ ತುಳಸಿ ತಿಂದ್ರೆ ನಿಮಗೆ ನಿದ್ರಾಹೀನತೆ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ. ತುಳಸಿ ಸೇವಿಸಿದ್ರೆ, ಉತ್ತಮ ನಿದ್ರೆ ಬರುತ್ತದೆ. ಮತ್ತು ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ಆಲಸ್ಯ ಆಗುತ್ತಿದ್ದರೆ, ಅದು ಕೂಡ ನಿಲ್ಲುತ್ತದೆ.
ಹಳದಿ ಹಲ್ಲಿನ ಸಮಸ್ಯೆ, ನಾಲಿಗೆಯ ಮೇಲೆ ಬಿಳಿ ಕಲೆಯಾಗೋದು ಮತ್ತು ಬಾಯಿ ವಾಸನೆ ಸಮಸ್ಯೆ. ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಬೇಕಾದಲ್ಲಿ ತುಳಸಿ ಎಲೆ ತಿನ್ನಿ. ಕೊಂಟ ತುಳಸಿ ಪುಡಿಗೆ ಕೊಂಚ ಸಾಸಿವೆ ಎಣ್ಣೆ ಸೇರಿಸಿ, ಹಲ್ಲುಜ್ಜಿದ್ರೆ, ನಿಮ್ಮ ಹಲ್ಲು ಬಿಳಿಯಾಗುತ್ತದೆ.
ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ, ಅಗತ್ಯಕ್ಕಿಂತ ಹೆಚ್ಚು ಬಿಕ್ಕಳಿಕೆ ಬರುವುದು, ವಾಂತಿಯಾಗುವುದು, ಅಜೀರ್ಣ ಸಮಸ್ಯೆ ಇತ್ಯಾದಿ ಸಮಸ್ಯೆಗಳು ದೂರವಾಗಬೇಕು ಎಂದಲ್ಲಿ ತುಳಸಿ ಸೇವಿಸಿ.