Spiritual: ನಾವು ವಾಸಿಸುವ ಜಾಗ ಎಷ್ಟು ಮುಖ್ಯವೋ, ಅಲ್ಲಿರುವ ವ್ಯಕ್ತಿಗಳು ಕೂಡ ಅಷ್ಟೇ ಮುಖ್ಯವಾಗಿರುತ್ತಾರೆ. ಅಂಥವರ ಸಂಗದಿಂದಲೇ ಕೆಲವೊಮ್ಮೆ ಕೆಲವು ವ್ಯಕ್ತಿಗಳು ಉದ್ಧಾರವಾಗುತ್ತಾರೆ. ಚಾಣಕ್ಯರ ಪ್ರಕಾರ 5 ವ್ಯಕ್ತಿಗಳು ಇಲ್ಲದಿರುವ ಜಾಗದಲ್ಲಿ ಒಂದು ದಿನವೂ ಉಳಿಯಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ 5 ವ್ಯಕ್ತಿಗಳು ಅಂತಾ ತಿಳಿಯೋಣ ಬನ್ನಿ..
ಶ್ರೀಮಂತ ವ್ಯಕ್ತಿ. ಯಾವ ಜಾಗದಲ್ಲಿ ಶ್ರೀಮಂತ ವ್ಯಕ್ತಿ ಇರುತ್ತಾನೋ, ಅವನು ಕೆಲವು ಜನರಿಗೆ ಉದ್ಯೋಗ ನೀಡುತ್ತಾನೆ. ಉತ್ತಮ ಸಂಬಳ ಕೊಡುತ್ತಾನೆ. ಇದರಿಂದ ಇನ್ನೊಂದಿಷ್ಟು ಜನರ ಕುಟುಂಬವು ನಿರ್ವಹಣೆಯಾಗುತ್ತದೆ. ಹಾಗಾಗಿ ಶ್ರೀಮಂತ ವ್ಯಕ್ತಿ ಇಲ್ಲದ ಜಾಗದಲ್ಲಿ ಎಂದಿಗೂ ಜೀವನ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ವೈದಿಕ ಜ್ಞಾನ ಹೊಂದಿರುವ ಬ್ರಾಹ್ಮಣ. ವೈದಿಕ ಜ್ಞಾನ ಹೊಂದಿರುವ ಬ್ರಾಹ್ಮಣರು ಇರುವ ಜಾಗದಲ್ಲಿ, ಸದಾ ಪೂಜೆ ಪುನಸ್ಕಾರ, ಹೋಮ ಹವನಗಳು ನಡೆಯುತ್ತದೆ. ಆ ಸ್ಥಳ ಸ್ವಚ್ಛವಾಗಿರುತ್ತದೆ. ಅಲ್ಲದೇ, ವೈದಿಕ ಜ್ಞಾನವಿರುವ ಬ್ರಾಹ್ಮಣ ಒಂದಿಷ್ಟು ಜ್ಞಾನವನ್ನು ಇನ್ನೊಬ್ಬರಿಗೂ ಹಂಚುತ್ತಾನೆ. ಅದರಿಂದ ಇತರರೂ ವೈದಿಕ ಜ್ಞಾನವನ್ನು ಪಡೆಯುತ್ತಾರೆ. ಜೀವನ ನಿರ್ವಹಣೆಗೆ ದಾರಿ ಮಾಡಿಕೊಳ್ಳುತ್ತಾರೆ. ಇಂಥ ಜ್ಞಾನಿಗಳು ಇಲ್ಲದ ಜಾಗದಲ್ಲಿ ಎಂದಿಗೂ ಇರಬಾರದು ಎನ್ನುತ್ತಾರೆ ಚಾಣಕ್ಯರು.
ಉತ್ತಮ ರಾಜ. ಉತ್ತಮ ರಾಜನಿರುವ ಜಾಗದಲ್ಲಿ, ಉತ್ತಮ ಆಡಳಿತವಿರುತ್ತದೆ. ಉತ್ತಮ ಮಳೆ ಬೆಳೆ ಇರುತ್ತದೆ. ಅಲ್ಲಿನ ಜನರು ಖುಷಿಯಿಂದ, ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಅವರಿಗೆ ಯಾವ ಶತ್ರುಗಳ ಕಾಟವೂ ಇರುವುದಿಲ್ಲ. ಜೀವ ಭಯವೂ ಇರುವುದಿಲ್ಲ. ಆದರೆ ರಾಜನಾದವನು ಉತ್ತಮನಲ್ಲದಿದ್ದರೆ, ಅವನು ಶಕ್ತಿವಂತ, ಬುದ್ಧಿವಂತನಾಗಿಲ್ಲದಿದ್ದರೆ, ಶತ್ರುಗಳು ಅಂಥ ರಾಜ್ಯವನ್ನು ಆವರಿಸಿ, ಅಲ್ಲಿನ ಜನರ ಜೀವನವನ್ನು ನಾಶ ಮಾಡುತ್ತಾರೆ. ಹಾಗಾಗಿ ಉತ್ತಮ ರಾಜನಿಲ್ಲದ ರಾಜ್ಯದಲ್ಲಿ ಎಂದಿಗೂ ವಾಸಿಸಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
ನದಿ. ಎಲ್ಲಿ ಹೆಚ್ಚು ನದಿಗಳು ಇರುತ್ತದೆಯೋ, ಅಲ್ಲಿನ ಜನ, ಕೃಷಿ ಮಾಡಿಕೊಂಡು, ನೆಮ್ಮದಿಯಾಗಿ ಜೀವನ ನಡೆಸುತ್ತಾರೆ. ಅಲ್ಲಿ ತಿನ್ನಲು ಉಣ್ಣಲು, ಬೆಳೆ ಬೆಳೆಯಲು ಯಾವುದೇ ತೊಂದರೆ ಇರುವುದಿಲ್ಲ. ಆದರೆ ನದಿ ಇಲ್ಲದ ಜಾಗದಲ್ಲಿ, ಜೀವನ ನಡೆಸುವುದು ಕಷ್ಟವಾಗುತ್ತದೆ. ಬೆಳೆ ಬೆಳೆಯಲು, ಜೀವನ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ನದಿ ಇರದ ಜಾಗದಲ್ಲಿ ಎಂದಿಗೂ ಜೀವನ ನಡೆಸಬಾರದು ಎಂದು ಚಾಣಕ್ಯರು ಹೇಳಿದ್ದಾರೆ.
ವೈದ್ಯ. ಯಾವ ಸ್ಥಳದಲ್ಲಿ ಉತ್ತಮ ವೈದ್ಯನಿರುತ್ತಾನೋ, ಅಂಥ ಜಾಗದಲ್ಲಿ ಜನ ಎಂಥ ರೋಗ ಬಂದರೂ, ಚಿಕಿತ್ಸೆ ಪಡೆದು, ನೆಮ್ಮದಿಯಾಗಿರುತ್ತಾರೆ. ಹಾಗಾಗಿ ಉತ್ತಮ ವೈದ್ಯನಿರುವ ಕಡೆ ಇರುವುದು ತುಂಬಾ ಮುಖ್ಯ. ಇಂದಿನ ಕಾಲದಲ್ಲಿ ಉತ್ತಮ ವೈದ್ಯರು ಸಿಗುವುದು ತುಂಬಾ ವಿರಳವಾಗಿದೆ. ಕೆಲವೇ ಕೆಲವು ಉತ್ತಮ ವೈದ್ಯರು, ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಉಳಿದ ಹಲವರು ಹಣಕ್ಕಾಗಿಯೇ ಆಸ್ಪತ್ರೆ ಕಟ್ಟಿರುವುದು ವಿಪರ್ಯಾಸದ ಸಂಗತಿ.