Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಹಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತಿದೆ. ಇದನ್ನ ಹಲವರು ನಿರ್ಲಕ್ಷಿಸುತ್ತಾರೆ. ಆದರೆ, ಇದನ್ನು ನಿರ್ಲಕ್ಷಿಸಿದರೆ, ಅದು ಮುಂದೆ ದೊಡ್ಡ ಆರೋಗ್ಯ ಸಮಸ್ಯೆ ತಂದಿಡುವ ಸಾಧ್ಯತೆ ಇರುತ್ತದೆ. ನೀವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮನೆಯಲ್ಲೇ ಇರುವ ಕೆಲ ಆಹಾರಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಏನನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಪ್ರತಿದಿನ ಒಂದು ಬೆಟ್ಟದ ನೆಲ್ಲಿಕಾಯಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಸೇರಿ, ಹಲವು ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ನೆಲ್ಲಿಕಾಯಿ ಸೇವಿಸಿದರೆ, ಹೊಟ್ಟೆಯಲ್ಲಿ ಗ್ಯಾಸ್ ಆಗುವುದಿಲ್ಲ. ಹಾಗೇ ಆದರೂ, ತೇಗು ಬರುವ ಮೂಲಕ ಗ್ಯಾಸ್ ಹೊರಹಾಕಲು, ಬೆಟ್ಟದ ನೆಲ್ಲಿಕಾಯಿ ಸಹಕಾರಿಯಾಗಿದೆ. ಹೊಟ್ಟೆ ನೋವಿನ ಸಮಸ್ಯೆ ಕಡಿಮೆ ಮಾಡಲು ಕೂಡ ನೆಲ್ಲಿಕಾಯಿ ಸಹಕಾರಿಯಾಗಿದೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ಪ್ರತಿದಿನ ಏನೂ ತೊಂದರೆಯಾಗದೇ, ಮಲ ವಿಸರ್ಜನೆಯಾಗಬೇಕು ಎಂದಲ್ಲಿ ನೀವು, ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನಬೇಕು. ಕೆಲವರು ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ತಿನ್ನುತ್ತಾರೆ. ಇನ್ನು ಕೆಲವರು ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಿ ಸೇವಿಸುತ್ತಾರೆ. ಮತ್ತೆ ಕೆಲವರು ನೆಲ್ಲಿಕಾಯಿಯನ್ನು ಉಪ್ಪಿನಲ್ಲಿ ಇರಿಸಿ, ಅದನ್ನು ಆಗಾಗ ತಂಬುಳಿ ಮಾಡಿ ಸೇವಿಸುತ್ತಾರೆ.
ಮತ್ತೆ ಕೆಲವರು ನೀರಿನಲ್ಲಿ ನೆಲ್ಲಿಕಾಯಿ ಕುದಿಸಿ, ಬಿಸಿಲಿನಲ್ಲಿ ಒಣಗಿಸಿ ಸೇವಿಸುತ್ತಾರೆ. ಈ ಎಲ್ಲ ವಿಧಾನವೂ ನೆಲ್ಲಿಕಾಯಿ ಸೇವಿಸುವ ಉತ್ತಮ ವಿಧಾನವಾಗಿದೆ. ಆದರೆ ಇದೆಲ್ಲಕ್ಕಿಂತ ಉತ್ತಮ ವಿಧಾನ, ಮತ್ತು ನೆಲ್ಲಿಕಾಯಿಯ ಸರಿಯಾದ ಸೇವನೆ ಅಂದ್ರೆ, ಹಸಿಯಾದ ನೆಲ್ಲಿಕಾಯಿ ಸೇವನೆ. ಹಸಿಯಾದ ಬೆಟ್ಟದ ನೆಲ್ಲಿಕಾಯಿ ತಿನ್ನಲು ಒಂಚೂರು ರುಚಿಯಾಗಿರುವುದಿಲ್ಲ. ಎರಡು ತುಂಡು ನೆಲ್ಲಿಕಾಯಿ ತಿನ್ನುವ ಹೊತ್ತಿಗೆ, ಚೆಲ್ಲಿ ಬಿಡೋಣವೆನ್ನಿಸುತ್ತದೆ.
ಆದರೆ ಹಸಿ ಬೆಟ್ಟದ ನೆಲ್ಲಿಕಾಯಿ ಸೇವನೆ ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿದೆ. ಗ್ಯಾಸ್ಟ್ರಿಕ್, ತ್ವಚೆಯ ಸಮಸ್ಯೆ, ಕೂದಲು ಉದುರುವ ಸಮಸ್ಯೆ, ಮೂಳೆಯ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ, ಹಲವು ಸಮಸ್ಯೆಯನ್ನು ಹಸಿ ನೆಲ್ಲಿಕಾಯಿ ನಿವಾರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಾಮಿನ್ ಸಿ ಹೇರಳವಾಗಿದ್ದು, ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸಿದರೆ, ನಿಮ್ಮ ಮೂಳೆ ಗಟ್ಟಿಮುಟ್ಟಾಗಿರುತ್ತದೆ. ಗರ್ಭಿಣಿಯರು ನೆಲ್ಲಿಕಾಯಿ ತಿಂದರೆ, ಅವರು ಮತ್ತು ಅವರಿಗೆ ಹುಟ್ಟುವ ಮಗು ಎರಡೂ ಗಟ್ಟಿಮುಟ್ಟಾಗಿರುತ್ತದೆ.
ಸುಂದರವಾಗಿ ಕಾಣಬೇಕು, ಉದ್ದನೆಯ ದಪ್ಪದ ಕೂದಲು ಬೇಕಂದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಿ. ಅಪಘಾತವಾಗಿ, ಮೂಳೆ ಮುರಿದುಕೊಂಡವರು ಕೂಡ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಿದ್ದಲ್ಲಿ, ಅವರು ಬೇಗನೇ ಚೇತರಿಸಿಕೊಳ್ಳುತ್ತಾರೆ. ಮೂಳೆಗಳು ಗಟ್ಟಿಯಾಗುತ್ತದೆ. ಇನ್ನು ನಿಮಗೆ ಬೆಟ್ಟದ ನೆಲ್ಲಿಕಾಯಿ ತಿಂದರೆ, ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.