Deepavali Special: ನಾವು ಈಗಾಗಲೇ ನಿಮಗೆ ಅಭ್ಯಂಂಗ ಸ್ನಾನ ಏಕೆ ಮಾಡುತ್ತಾರೆ ಎಂಬ ಬಗ್ಗೆ ಹೇಳಿದ್ದೇವೆ. ಅಭ್ಯಂಗ ಸ್ನಾನದ ದಿನವೇ ನರಕ ಚತುರ್ದಶಿಯನ್ನು ಆಚರಸಲಾಗುತ್ತದೆ. ಹಾಗಾಗಿ ನಾವಿಂದು ನರಕ ಚತುರ್ದಶಿಯ ಹಿಂದಿನ ವಿಶೇಷತೆ ಏನು..? ನರಕಾಸುರನ ವಧೆ ಹೇಗೆ ಆಯಿತು ಎಂಬ ಬಗ್ಗೆ ಹೇಳಲಿದ್ದೇವೆ.
ನರಕಾಸುರನೆಂಬ ರಾಕ್ಷಸ, ಬ್ರಹ್ಮನಿಂದ ವರವೊಂದನ್ನು ಪಡೆದಿದ್ದ. ಅದೇನೆಂದರೆ, ಅವನ ಸಾವು ಯಾವುದೇ ರಾಕ್ಷಸರು, ಮನುಷ್ಯರು ಮತ್ತು ದೇವತೆಗಳಿಂದ ಆಗಬಾರದು. ಅವನ ಹೆತ್ತ ತಾಯಿಯಿಂದಲೇ ಅವನ ಸಾವಾಗಬೇಕು ಎಂದು ವರ ಪಡೆದಿದ್ದನಂತೆ. ಏಕೆಂದರೆ, ಅವನ ತಾಯಿ ಅದಾಗಲೇ ತೀರಿ ಹೋಗಿದ್ದಳು. ಹಾಗಾಗಿ ಅವನಿಗೆ ಸಾವು ಬರುವುದೇ ಇಲ್ಲವೆಂಬ ಭ್ರಮೆಯಿಂದ ಅವರು ಬ್ರಹ್ಮನಲ್ಲಿ ಈ ವರ ಕೇಳಿದ್ದ.
ಹಾಗಾಗಿ ದೇವತೆಗಳಿಗೆ, ಮನುಷ್ಯರಿಗೆ, ಋಷಿಮುನಿಗಳಿಗೆ ನರಕಾಸುರ ತೊಂದರೆ ಕೊಡುತ್ತಿದ್ದ. ಅಲ್ಲದೇ, ಇಂದ್ರನ ಮೇಲೆ ದಾಳಿ ಮಾಡಿ, ಇಂದ್ರನ ಬಳಿ ಇದ್ದ 16 ಸಾವಿರ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ. ಇಷ್ಟೇ ಅಲ್ಲದೇ, ಅಲ್ಲೇ ಇದ್ದ ದೇವತೆಯಾದ ಅದಿತಿಯ ಕಿವಿಯೋಲೆ ಬೇಕೆಂದು, ಆಕೆಯ ಕಿವಿಯನ್ನೇ ಕತ್ತಿರಿಸಿ, ಕಿವಿಯೋಲೆಯನ್ನು ತೆಗೆದುಕೊಂಡು ಹೋದನು.
ಆಗ ಅದಿತಿ, ಸತ್ಯಭಾಮೆಯಲ್ಲಿ ಬಂದು ತನ್ನ ಸಮಸ್ಯೆಯನ್ನು ಹೇಳಿಕೊಂಡಳು. ನಡೆದ ಘಟನೆಯನ್ನು ವಿವರಿಸಿದಳು. ಸತ್ಯಭಾಮೆ ಶ್ರೀಕೃಷ್ಣನಲ್ಲಿ ಈ ವಿಷಯ ತಿಳಿಸಿದಾಗ, ಸತ್ಯಭಾಮೆ ನೀನೂ ನನ್ನೊಂದಿಗೆ ಹೊರಡು. ನೀನು ನನ್ನೊಂದಿಗೆ ಯುದ್ಧ ಭೂಮಿಯಲ್ಲಿ ಹೋರಾಡಬೇಕು ಎಂದುಕೊಂಡಿದ್ದಿಯಲ್ಲವೇ, ಆ ಸಮಯ ಈಗ ಬಂದಿದೆ ಎಂದು ಹೇಳಿ, ಸತ್ಯಭಾಮೆಯೊಂದಿಗೆ ನರಕಾಸುರನ ವಧೆಗಾಗಿ ಹೊರಡುತ್ತಾರೆ.
ಕೃಷ್ಣ ಸೂತ್ರಧಾರಿಯಾಗಿ ಯುದ್ಧ ಮಾಡುವಾಗ, ನರಕಾಸುರನ ದಾಳಿಗೆ ಮೂರ್ಛೆ ಹೋದಂತೆ ನಟಿಸುತ್ತಾನೆ. ಆಗ ಸತ್ಯಭಾಮೆ ತನ್ನ ಬಳಿ ಇದ್ದ ಬಾಣದಿಂದ ನರಕಾಸುರನ ದೇಹವೇ ಕತ್ತರಿಸಿಹೋಗುವಂತೆ ಮಾಡುತ್ತಾಳೆ. ಅಲ್ಲಿಗೆ ನರಕಾಸುರನ ವಧೆಯಾಾಗುತ್ತದೆ. ಭೂದೇವಿ ಎಂದರೆ ಎಲ್ಲರ ತಾಯಿ ಎಂದೇ ಭಾವಿಸಲಾಗುತ್ತದೆ. ಮತ್ತು ಸತ್ಯಭಾಮೆ ಭೂದೇವಿಯ ಸ್ವರೂಪವಾಗಿರುತ್ತಾಳೆ. ನರಕಾಸುರನಿಗೆ ಇದ್ದ ವರದ ಪ್ರಕಾರ, ಅವನು ತಾಯಿಯಿಂದಲೇ ಹತನಾಗಬೇಕಾಗಿರುತ್ತದೆ.
ಹಾಗಾಗಿ ಸೂತ್ರಧಾರಿಯಾದ ಕೃಷ್ಣ, ಯುದ್ಧ ಆಗುವಂತೆ ಮಾಡಿ, ಸತ್ಯಭಾಮೆಯಿಂದಲೇ, ನರಕಾಸುರನ ವಧೆ ಮಾಡಿಸುತ್ತಾನೆ. ಬಳಿಕ ಸತ್ಯಭಾಮೆಗೆ ಎಲ್ಲವನ್ನೂ ವಿವರಿಸುತ್ತಾನೆ. ಹೀಗಾಗಿ ಹಿಂದೂಗಳು, ನರಕಾಸುರನ ಸಂಹಾರದ ನೆನಪಿಗೆ ನರಕ ಚತುರ್ದಶಿಯನ್ನು ಆಚರಿಸುತ್ತಾರೆ.