Spiritual: ಹನುಮಂತನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಹಲವು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆ ಮಾಡುತ್ತಾರೆ. ಆದರೆ ನೀವು ರಾಮಾಯಣವನ್ನು ಓದಿದರೆ, ಇಲ್ಲಿ ಹನುಮನಿಗೆ ಮಕರಧ್ವಜನೆಂಬ ಮಗನಿರುವುದು ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಹನುಮಂತನಿಗೆ ವಿವಾಹವಾಗದಿದ್ದರೂ, ಮಗ ಹೇಗೆ ಹುಟ್ಟಿದ ಅನ್ನೋ ಬಗ್ಗೆ ಕಥೆ ಇಲ್ಲಿದೆ ನೋಡಿ..
ರಾವಣ ಸೇನೆ ಮತ್ತು ರಾಮನ ನಡುವೆ ಯುದ್ಧ ನಡೆಯುವಾಗ, ರಾಮನಿಗೆ ಸಾಥ್ ನೀಡಲು, ಹನುಮ ಲಂಕೆಗೆ ಧಾವಿಸುತ್ತಾನೆ. ಆದರೆ ಅಷ್ಟರಲ್ಲಿ ಅಹಿರಾವಣ, ರಾಮ ಮತ್ತು ಲಕ್ಷ್ಮಣರನ್ನ ಕಪಟದಿಂದ ಬಂಧಿಸಿ, ಪಾತಾಳ ಲೋಕಕ್ಕೆ ಕರೆದೊಯ್ಯುತ್ತಾನೆ. ರಾಮ ಲಕ್ಷ್ಮಣರನ್ನು ಕಾಪಾಡಲು ಹನುಮಂತ, ಪಾತಾಳಕ್ಕೆ ಹೋಗುತ್ತಾನೆ.
ಆದರೆ ಪಾತಾಳ ಲೋಕವನ್ನು ಕಾಯಲು ಅಹಿರಾವಣ, ಮಕರಧ್ವಜನನ್ನು ನೇಮಿಸಿದ್ದ. ಹನುಮನನ್ನು ಪಾತಾಳ ಲೋಕಕ್ಕೆ ಹೋಗಲು, ಮಕರಧ್ವಜ ಬಿಡಲಿಲ್ಲ. ಆದ್ದರಿಂದ ಇಬ್ಬರ ನಡುವೆ ಘೋರ ಯುದ್ಧವಾಯಿತು. ಮಕರಧ್ವಜ ಹನುಮಂತನ ಸಮಕ್ಕೆ ಹೋರಾಡಿದ. ಆದರೂ ಜಯವಾಗಿದ್ದು ಹನುಮನಿಗೆ.
ಆದರೆ ಹನುಮನಿಗೆ ಮಕರಧ್ವಜನ ರೂಪ ಕಂಡು ಆಶ್ಚರ್ಯವಾಗಿತ್ತು. ಏಕೆಂದರೆ, ಮಕರಧ್ವಜನ ಅರ್ಧ ಕಾಯ ವಾನರನದ್ದು ಮತ್ತು ಅರ್ಧ ಕಾಯ ಮೀನಿನದ್ದಾಗಿತ್ತು. ಆಗ ಹನುಮ, ನಿನ್ನ ದೇಹ ಅರ್ಧ ವಾನರ ಮತ್ತು ಅರ್ಧ ಮೀನಿನದ್ದಿದೆ. ಹಾಗಾದರೆ ನೀನು ಯಾರ ಪುತ್ರ ಎಂದು ಕೇಳುತ್ತಾನೆ. ಅದಕ್ಕೆ ಮಕರಧ್ವಜ, ನಾನು ಹನುಮ ಪುತ್ರನೆನ್ನುತ್ತಾನೆ. ಆಗ ಹನುಮನಿಗೆ ಕೋಪ ಬರುತ್ತದೆ. ಇದು ಹೇಗೆ ಸಾಧ್ಯ, ಹನುಮಂತ ಬ್ರಹ್ಮಚಾರಿಯಾಗಿದ್ದು, ನೀನು ಅವನ ಪುತ್ರನಾಗಲು ಹೇಗೆ ಸಾಧ್ಯವೆಂದು ಪ್ರಶ್ನಿಸುತ್ತಾನೆ.
ಅದಕ್ಕೆ ಉತ್ತರಿಸಿದ ಮಕರಧ್ವಜ, ಹನುಮಂತ ಸೀತೆಯನ್ನು ಕಾಣಲು ಬಂದಾಗ, ಮೇಘನಾಥ ಹನುಮನನ್ನು ಬ್ರಹ್ಮಾಸ್ತ್ರನಿಂದ ಕಟ್ಟಿಹಾಕಿ, ರಾವಣನ ಎದುರು ತಂದು ನಿಲ್ಲಿಸಿದ. ಆಗ ರಾವಣ, ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ. ಅದೇ ಬೆಂಕಿಯಿಂದ ಹನುಮ, ರಾವಣನ ಇಡೀ ಸ್ವರ್ಣಲಂಕೆಯನ್ನೇ ಸುಟ್ಟು ಹಾಕಿದ. ಬಳಿಕ ಅಲ್ಲೇ ಇದ್ದ ನದಿಗೆ ಹಾಕಿ, ತನ್ನ ಬಾಲಕ್ಕೆ ತಾಕಿದ್ದ ಬೆಂಕಿಯನ್ನು ನಂದಿಸಿಕೊಂಡ. ಆದರೆ ಆ ನದಿ ದಾಟಿ ಹೋಗುವುದರೊಳಗೆ, ಹನುಮನ ಬೆವರ ಹನಿ, ನದಿಗೆ ಬಿದ್ದು, ಅಲ್ಲೇ ಇದ್ದ ನನ್ನ ತಾಯಿ, ಅಂದರೆ ಹೆಣ್ಣು ಮೀನು, ಬೆವರನ್ನು ಆಹಾರವೆಂದು ಸೇವಿಸಿತು. ಈ ಪರಿಣಾಮ ಅವಳು ಗರ್ಭವತಿಯಾಗಿ ನನಗೆ ಜನ್ಮವಿತ್ತಳು ಎನ್ನುತ್ತಾನೆ.
ಇದನ್ನು ಕೇಳಿದ ಹನುಮಂತ, ಹಾಗಾದರೆ ನಾನೇ ನಿನ್ನ ತಂದೆ ಹನುಮಂತನೆನ್ನುತ್ತಾನೆ. ಆಗ ಮಕರಧ್ವಜ ಹನುಮನ ಕಾಲಿಗೆರಗಿ, ಕ್ಷಮೆ ಕೇಳಿ, ಆಶೀರ್ವಾದ ಪಡೆದು, ಪಾತಾಳ ಲೋಕಕ್ಕೆ ಹೋಗಲು ಬಿಡುತ್ತಾನೆ. ಹನುಮ ಪಾತಾಳಕ್ಕೆ ಹೋಗಿ, ಯುದ್ಧ ಮಾಡಿ ರಾಮ, ಲಕ್ಷ್ಮಣರನ್ನು ಕರೆತರುತ್ತಾನೆ.
ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..
ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..