Spiritual: ಶ್ರೀಮಂತರಾಗಬೇಕು ಅಂದ್ರೆ ಲಕ್ಷ್ಮೀ ಮತ್ತು ಕುಬೇರನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. ಆದರೆ ಎಂಥ ಶ್ರೀಮಂತನಿಗಾದರೂ, ಗರ್ವ ಬಂದಾಗ, ಅಂಥವನಿಗೆ ದೇವರು ಬುದ್ಧಿ ಕಲಿಸುತ್ತಾನೆ ಅನ್ನೋದಕ್ಕೆ ಕುಬೇರ ಮತ್ತು ಗಣಪತಿಯ ನಡುವೆ ನಡೆದ ಘಟನೆಯೇ ಸಾಕ್ಷಿ. ಈ ಬಗ್ಗೆ ಕಥೆಯನ್ನು ಕೇಳೋಣ ಬನ್ನಿ..
ಒಮ್ಮೆ ಕುಬೇರನಿಗೆ ತನ್ನ ಸಂಪತ್ತಿನ ಬಗ್ಗೆ ಗರ್ವವಾಗಿ, ಅದನ್ನ ದೇವಾನು ದೇವತೆಗಳಿಗೆ ತಿಳಿಸಬೇಕು. ದೇವಲೋಕದಲ್ಲಿ ತನ್ನ ಸಂಪತ್ತಿನ ಬಗ್ಗೆ ಎಲ್ಲರೂ ಹೊಗಳಬೇಕು ಎಂಬ ಆಸೆಯಾಯಿತು. ಆಗ ಕುಬೇರ ಕೈಲಾಸಕ್ಕೆ ಹೋಗಿ, ಶಿವನಿಗೆ ತನ್ನ ಮನೆಗೆ ಊಟಕ್ಕೆ ಬರಲು ಆಹ್ವಾನ ನೀಡುತ್ತಾನೆ. ಆಗ ಶಿವ, ನನ್ನ ಬದಲು ಭೋಜನ ಪ್ರಿಯನಾದ ನನ್ನ ಪುತ್ರ ಗಣೇಶ ಮತ್ತು ಅವನ ವಾಹನ ಇಲಿರಾಜ ನಿಮ್ಮೊಂದಿಗೆ ಬರುತ್ತಾರೆ ಎಂದು ಹೇಳುತ್ತಾನೆ.
ಅದಕ್ಕೆ ಒಪ್ಪಿದ ಕುಬೇರ ಗಣೇಶ ಮತ್ತು ಇಲಿರಾಜನನ್ನು ತನ್ನೊಂದಿಗೆ ಕರೆದುಕೊಂಡು ಅರಮನೆಗೆ ಹೋಗುತ್ತಾನೆ. ಗಣೇಶನಿಗೆ ಕುಬೇರ ತನ್ನ ಸಂಪತ್ತಿನ ಸೊಕ್ಕು ತೋರಿಸಲು ಬಂದಿದ್ದಾನೆಂಬುದು ಗೊತ್ತಾಗುತ್ತದೆ. ಆಗ ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸುತ್ತಾನೆ. ಮತ್ತು ನಾನು ಹೊಟ್ಟೆ ತುಂಬುವವರೆಗೂ ಊಟ ಮಾಡುತ್ತೇನೆ. ನನ್ನ ಹೊಟ್ಟೆ ತುಂಬಿಸುವಷ್ಟು ಶಕ್ತಿ ನಿಮ್ಮಲ್ಲಿದೆಯಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಕುಬೇರ ನಗುತ್ತಾ, ನಾನು ಶ್ರೀಮಂತರಲ್ಲೇ ಶ್ರೀಮಂತ. ನೀನು ಸಾಕಪ್ಪ ಸಾಕು ಅನ್ನುವವರೆಗೂ ಊಟ ಬಡಿಸುತ್ತೇನೆ ಬಾ ಎಂದು ಹೇಳುತ್ತಾರೆ.
ಕುಬೇರ ಗಣೇಶ ಮತ್ತು ಇಲಿರಾಜನನ್ನು ಖುಷಿ ಖುಷಿಯಿಂದ ತನ್ನ ಅರಮನೆಗೆ ಬರಮಾಡಿಕೊಳ್ಳುತ್ತಾನೆ. ಗಣೇಶನ ಎದುರು ತರಹೇವಾರಿ ಭಕ್ಷ್ಯ ಭೋಜನ ತರಿಸಿಡುತ್ತಾನೆ. ಗಣೇಶ ಮತ್ತು ಇಲಿರಾಯ ಊಟ ಮಾಡಲು ಪ್ರಾರಂಭಿಸುತ್ತಾರೆ. ಮಾಡಿದ ಅಡುಗೆ ಎಲ್ಲ ಮುಗಿಯುವವರೆಗೂ ಗಣೇಶ ಊಟ ಮಾಡುತ್ತಾನೆ. ಸಾವಿರ ಸಾವಿರ ಮಂದಿ ಊಟ ಮಾಡುವಷ್ಟು ಅಡುಗೆ ಒಂದೇ ಸಮನೆ ಮುಗಿಯುತ್ತದೆ. ಮನೆಯಲ್ಲಿರುವ ಧಾನ್ಯಗಳೆಲ್ಲ ಖಾಲಿಯಾಗುತ್ತದೆ.
ಕುಬೇರನಿಗೆ ಕೊಟ್ಟು ಮಾತು ಉಳಿಸಿಕೊಳ್ಳಲಾಗುವುದಿಲ್ಲ. ಆಗ ಗಣೇಶ, ನನಗೆ ಇನ್ನೂ ಊಟ ಬೇಕು. ಬೇಗ ಮತ್ತೊಮ್ಮೆ ಅಡುಗೆ ಮಾಡಿಸು, ಇಲ್ಲವಾದಲ್ಲಿ ನಾನು ನಿನ್ನನ್ನೇ ತಿನ್ನುತ್ತೇನೆ ಎನ್ನುತ್ತಾನೆ. ಆಗ ಕುಬೇರ ಗಣೇಶನಲ್ಲಿ ಸಂಪತ್ತಿನ ಸೊಕ್ಕು ತೋರಿಸಿದ್ದಕ್ಕೆ, ಕ್ಷಮೆಯಾಚಿಸುತ್ತಾನೆ. ಅಲ್ಲಿಗೆ ಕುಬೇರನ ಗರ್ವಭಂಗವಾಗುತ್ತದೆ.