Spiritual: ನಿಮ್ಮ ಜೀವನ ವ್ಯರ್ಥವಾಗುವುದನ್ನು ಹೇಗೆ ತಡೆಯಬೇಕು ಅನ್ನೋ ವಿಷಯದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇಂದಿನ ಕಾಲದವರ ಜೀವನ ಇದೇ ರೀತಿ, ವ್ಯರ್ಥವಾಗುವಂತೆಯೇ ಇದೆ. ಇದಕ್ಕೆ ಕಾರಣ ಇಂಟರ್‌ನೆಟ್. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಪ್ ಸೇರಿ ಇತರೇ ಆ್ಯಪ್‌ಗಳು ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದೆ. ಒಮ್ಮೆ ಮೊಬೈಲ್ ಮುಟ್ಟಿದರೆ, ಸ್ವೈಪ್ ಮಾಡುತ್ತ ಮಾಡುತ್ತ ನಾವು ಅಲ್ಲೇ ಕಲ್ಲಾಗಿಬಿಡುತ್ತೇವೆ. ಇದೇ ರೀತಿ ಟೈಮ್ ವೇಸ್ಟ್, ಜೀವನ ವ್ಯರ್ಥವಾಗುತ್ತದೆ. ನಾವು ಈ ವಿಷಯದ ಕುರಿತು ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ನಿಮ್ಮ ಜೀವನ ವ್ಯರ್ಥವಾಗಲು ಮೊದಲ ಕಾರಣವೆಂದರೆ, ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು. ಈ ಕೆಲಸವನ್ನು ನೀವೇ ಮಾಡಬೇಕೆಂದಿಲ್ಲ. ನಿಮ್ಮ ಮನೆಯಲ್ಲಿರುವವರೂ ಮಾಡಬಹುದು. ಅವರು ಹೇಗಿದ್ದಾರೆ, ನೀನು ಹೇಗಿದ್ದಿ. ಈ ರೀತಿ ಹಂಗಿಸಬಹುದು. ಅಥವಾ ನಿಮಗೆ ನಿಮ್ಮ ಬಗ್ಗೆ ಕೀಳರಿಮೆ ಬರಬಹುದು. ಆದರೆ ಹೀಗೆ ಮಾಡಿದಾಗ, ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಬಗ್ಗೆ ನೀವು ನಂಬಿಕೆ ಇಡಿ.
ಎರಡನೇಯ ಕಾರಣ, ಮುಖ್ಯವಾದ ಕೆಲಸವನ್ನು ಮುಂದೂಡುವುದು. ನಿಮ್ಮ ಗುರಿ ತಲುಪಲು ಮಾಡಬೇಕಾದ ಕೆಲಸವನ್ನು ಎಷ್ಟು ಸಾಧ್ಯವೋ, ಅಷ್ಟು ಬೇಗ ಮಾಡಿ ಮುಗಿಸಿ. ನಾಳೆ ಮಾಡಿದರಾಯಿತು. ಇವತ್ತು ಬೇರೆ ಕೆಲಸವಿತ್ತು. ಹೀಗೆ ನಾನಾ ಕಾರಣಗಳನ್ನು ಹೇಳಿ ಕೆಲಸವನ್ನು ಮುಂದೂಡಬೇಡಿ. ನೀವು ಯಶಸ್ವಿಯಾಗದಿರಲು, ನಿಮ್ಮ ಜೀವನ ವ್ಯರ್ಥವಾಗಲು ಇದೇ ಕಾರಣ.
ಮೂರನೇಯ ಕಾರಣ, ಋಣಾತ್ಮಕವಾಗಿಯೇ ಯೋಚಿಸುವವರ ಜೊತೆ ನೀವಿರುವುದು. ನಿಮ್ಮ ಮನೆಯಲ್ಲಿ, ಅಥವಾ ನಿಮ್ಮ ಸುತ್ತಮುತ್ತಲು ಬರೀ ಕೆಟ್ಟದ್ದನ್ನೇ, ಬರೀ ತಪ್ಪುಗಳನ್ನೇ ಕಂಡುಹಿಡಿದು ಮಾತನಾಡುವವರಿದ್ದಾಗ, ನಿಮಗೆ ಯಾವುದೇ ಕೆಲಸಕ್ಕೂ ಮುಂದೆ ಹೋಗಲು ಇಷ್ಟವಾಗುವುದಿಲ್ಲ. ಸಾಧ್ಯವಾದರೆ ಅಂಥವರಿಂದ ದೂರವಿರಿ. ಇಲ್ಲದಿದ್ದಲ್ಲಿ, ಅಂಥವರ ಮಾತನ್ನು ನಿರ್ಲಕ್ಷಿಸುವುದನ್ನು ಕಲಿಯಿರಿ.
ಹಾಗಾದರೆ ಜೀವನ ವ್ಯರ್ಥವಾಗಬಾರದು ಅಂದ್ರೆ ಏನು ಮಾಡಬೇಕು..? ಅನ್ನೋ ಪ್ರಶ್ನೆಗೆ ಉತ್ತರ, ನಿಮ್ಮ ಹವ್ಯಾಸಗಳನ್ನು ಎಂದಿಗೂ ಮರಿಯಬೇಡಿ. ಕೆಲವರಿಗೆ ಸಂಗೀತ, ನೃತ್ಯ, ಪೇಯ್ಟಿಂಗ್ ಇತ್ಯಾದಿ ಹವ್ಯಾಸಗಳಿರುತ್ತದೆ. ಅಂಥವರು ಅದನ್ನು ಎಂದಿಗೂ ನಿಲ್ಲಿಸಬೇಡಿ. ಯಾಕಂದ್ರೆ ಆ ಕೆಲಸದಿಂದ ನಿಮ್ಮ ಮನಸ್ಸಿಗೆ ಖುಷಿ, ನೆಮ್ಮದಿ ಸಿಗುತ್ತದೆ. ಅದು ನಿಮಗೆ ಊಟ ಕೊಡುವ ಕೆಲಸವೂ ಆಗಬಹುದು.
ಎಲ್ಲರೊಂದಿಗೂ ಉತ್ತಮವಾಗಿ ಇರುವುದನ್ನ ಕಲಿಯಿರಿ. ದ್ವೇಷ ಸಾಧಿಸುವುದನ್ನು ಬಿಡಿ. ಅವರು ಮಾಡಿದರೆಂದು ನಾನು ಮಾಡಿದೆ ಎನ್ನುವ ಬುದ್ಧಿಯನ್ನು ಬಿಟ್ಟುಬಿಡಿ. ಯಾಕಂದ್ರೆ ಹೀಗೆ ಮಾಡುವುದರಿಂದಲೇ, ನಮ್ಮ ನೆಮ್ಮದಿ ಹಾಳಾಗುತ್ತದೆ. ಬರೀ ಇನ್ನೊಬ್ಬರ ಬಗ್ಗೆಯೇ ಯೋಚಿಸುವಂತಾಗುತ್ತದೆ. ಆದರೆ, ನೀವು ನಿಮ್ಮಷ್ಟಕ್ಕೆ ನೀವಿದ್ದು, ಇತರರ ಕೊಂಕು ಮಾತು, ಕೊಂಕು ಬುದ್ಧಿಗೆ ಲಕ್ಷ್ಯ ಕೊಡದಿದ್ದಲ್ಲಿ, ನಿಮ್ಮ ಗುರಿಯನ್ನು ನೀವು ತಲುಪಬಹುದು. ನಿಮ್ಮ ಜೀವನವನ್ನು ನೀವು ಆನಂದಿಸಬಹುದು.
ಯಾವುದಾದರೂ ಗುರಿಯನ್ನು ಹೊಂದಿದ್ದರೆ, ಅದನ್ನು ಪೂರೈಸಲು ಪ್ರಯತ್ನಿಸಿ. ಕೆಲವರಿಗೆ ತಮಗೆ ಸಿಕ್ಕ ಸಮಯದೊಳಗೆ ತಾವಂದುಕೊಂಡ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಮದುವೆಯ ಮುನ್ನ ಕೆಲ ಹೆಣ್ಣು ಮಕ್ಕಳಿಗೆ ತಾವಂದುಕೊಂಡ ಕೆಲಸ ನೆರವೇರಿಸಲು ಸಾಧ್ಯವಾಗುವುದಿಲ್ಲ. ಹಾಗಂತ, ಮದುವೆಯಾಯಿತು, ಇನ್ನು ಸಂಸಾರದ ಹೊರೆ ಹೊರುತ್ತೇವೆಂದು ಕುಳಿತುಕೊಳ್ಳಬೇಡಿ. ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ, ನಿಮ್ಮ ಗುರಿ ಸಾಧಿಸಿ.