Spiritual: ಬಟ್ಟೆ ಅನ್ನೋದು ಮನುಷ್ಯನ ಜೀವನದ ಮುಖ್ಯವಾದ ಭಾಗವಾಗಿದೆ. ಹೊಟ್ಟೆ ತುಂಬಿ, ಆರೋಗ್ಯವಾಗಿರಲು ಆಹಾರವೆಷ್ಟು ಮುಖ್ಯವೋ. ಅದೇ ರೀತಿ ಮೈ ಮುಚ್ಚಿಕೊಂಡಿರಲು ಬಟ್ಟೆಯೂ ಅಷ್ಟೇ ಮುಖ್ಯ. ಆದರೆ ಬಟ್ಟೆಯನ್ನ ನಾವು ಸರಿಯಾಗಿ ಬಳಸದಿದ್ದಲ್ಲಿ, ಅದರಲ್ಲಿ ನಕಾರಾತ್ಮಕ ಶಕ್ತಿಯ ವಾಸವಾಗಿ, ಅದು ಮನೆಗೆ ದರಿದ್ರ ತರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ನಾವು ನಮ್ಮ ಬಟ್ಟೆಗಳನ್ನು ಹೇಗೆ ಬೇಕೋ ಹಾಗೆ ಇಟ್ಟಾಗ, ಅಥವಾ ಮಲಗೆದ್ದ ಬಳಿ, ಹಾಸಿಗೆಯನ್ನು ಹಾಗೇ ಬಿಟ್ಟು ಹೋದಾಗ, ಮನೆಯಲ್ಲಿ ಹಿರಿಯರು ಬೈಯ್ಯುತ್ತಾರೆ. ಅಲ್ಲದೇ, ಬಟ್ಟೆಯನ್ನು, ಹಾಸಿಗೆಯನ್ನು ಸರಿಯಾಗಿ ಮಡಿಚಿಡಿ ಎಂದು ಹೇಳುತ್ತಾರೆ. ಹೀಗೆ ಯಾಕೆ ಹೇಳುತ್ತಾರೆ ಅಂದರೆ, ಹಾಗೆ ತೆರೆದಿಟ್ಟ ಬಟ್ಟೆಯಲ್ಲಿ ನಕಾರಾತ್ಮಕ ಶಕ್ತಿ ಹೋಗುವ ಭಯವಿರುತ್ತದೆ. ಹಾಗಾಗಿ ನಾವು ಬಳಸಿದ ಬಟ್ಟೆಯನ್ನು ಸ್ವಚ್ಛವಾಗಿ ಒಗೆದು, ಮಡಿಚಿಡಬೇಕು.
ಇನ್ನು ಅಂತ್ಯಸಂಸ್ಕಾರ ಮತ್ತು ಅಂತಿಮ ದರ್ಶನಕ್ಕೆ ಹೋಗುವಾಗ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಗಬೇಕು ಎಂದು ಹೇಳಲಾಗುತ್ತದೆ. ಹೆಚ್ಚಾಗಿ ನಾವು ಬಾಲಿವುಡ್ ಮಂದಿ ಈ ರೀತಿ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಗುವುದನ್ನು ಕಂಡಿದ್ದೇವೆ. ಯಾಕೆ ಈ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆ ಧರಿಸಬೇಕು ಎಂದರೆ, ಬಿಳಿ ಬಣ್ಣದ ಬಟ್ಟೆ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಹಾಗಾಗಿಯೇ ಪಾರ್ಥೀವ ಶರೀರಕ್ಕೆ ಯಾವುದೇ ನಕಾರಾತ್ಮಕ ಶಕ್ತಿಯ ಪ್ರವೇಶವಾಗಬಾರದು ಎಂದು ಬಿಳಿ ಬಟ್ಟೆ ಹೊದಿಸಲಾಗುತ್ತದೆ.
ಇನ್ನು ಕೆಲವರು ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ ಎಂದು ಹೇಳುತ್ತಾರೆ. ಆದರೆ ಇಂದಿನ ಕಾಲದವರಿಗೆ ಕಪ್ಪು ಬಣ್ಣದ ಬಟ್ಟೆ ಧರಿಸುವುದೇ ಸ್ಟೈಲ್ ಆಗಿದೆ. ಕಪ್ಪು ಬಟ್ಟೆ ಧರಿಸಿದರೆ, ಅಟ್ರ್ಯಾಕ್ಟಿವ್ ಆಗಿ ಕಾಣಿಸುವ ಕಾರಣ, ಆ ಬಟ್ಟೆಯನ್ನೋ ಇಷ್ಟಪಡುತ್ತಾರೆ. ಆದರೆ ಕಪ್ಪು ಬಣ್ಣದ ಬಟ್ಟೆ ನಕಾರಾತ್ಮಕತೆಯನ್ನು ಸೆಳೆಯುತ್ತದೆ. ಹಲವರಿಗೆ ಕಪ್ಪು ಬಟ್ಟೆ ಧರಿಸಿದಾಗ, ಮಾನಸಿಕ ನೆಮ್ಮದಿ ಇರುವುದಿಲ್ಲ. ಜಗಳಗಳಾಗುತ್ತದೆ. ಹಾಗಾಗಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎನ್ನಲಾಗಿದೆ.
ಇನ್ನು ಮರಣ ಹೊಂದಿದವರ ಬಟ್ಟೆಯನ್ನು ಕೆಲವರು ದಾನ ಮಾಡುತ್ತಾರೆ. ಆದರೆ ಅದನ್ನು ದಾನ ತೆಗೆದುಕೊಳ್ಳುವವರು ಮಾತ್ರ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಮರಣ ಹೊಂದಿದವರಿಗೆ ಆ ಬಟ್ಟೆ ತುಂಬಾ ಇಷ್ಟವಾಗಿದ್ದರೆ, ಅದರಿಂದ ಸಮಸ್ಯೆಯಾಗುತ್ತದೆ. ವಿಚಿತ್ರ ಘಟನೆಗಳು ನಡೆಯಬಹುದು. ಹಾಗಾಗಿ ಮರಣ ಹೊಂದಿದವರ ಬಟ್ಟೆ ಎಂದಿಗೂ ಧರಿಸಬಾರದು.