ಚೊಚ್ಚಲ ವಿಶ್ವಕಪ್ ಕನಸಿನಲ್ಲಿರುವ ಇಂಗ್ಲೆಂಡ್, 27 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೇರಿದೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲ ಪಡೆ, ಭರ್ಜರಿ 8 ವಿಕೆಟ್ ಗಳ ಗೆಲುವು ದಾಖಲಿಸಿತು. ಈ ಮೂಲಕ 1992ರ ನಂತರ ಇದೇ ಮೊದಲ ಬಾರಿಗೆ ಫೈನಲ್ಸ್ ತಲುಪಿತು. ಎಡ್ಜ್ ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್, ಆಘಾತಕ್ಕೀಡಾಯಿತು. ಇಂಗ್ಲೆಂಡ್ ವೇಗಿಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಸ್ಟೀವ್ ಸ್ಮಿತ್, ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದ್ರು. ಎಚ್ಚರಿಕೆಯ ಆಟ ದೊಂದಿಗೆ ಅರ್ಧಶತಕ ಗಳಿಸಿದ ಸ್ಮಿತ್, ರನ್ ಔಟ್ ಆಗಿ ಪೆವಿಲಿಯನ್ ಗೆ ಮರಳುವ ಮುನ್ನ 85 ರನ್ ಗಳಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ, 49 ಓವರ್ ಗಳಲ್ಲಿ 223 ರನ್ ಗಳಿಗೆ ಆಲ್ ಔಟ್ ಆಯಿತು.
ಆಸಿಸ್ ನೀಡಿದ ಟಾರ್ಗೆಟ್ ಸವಾಲ್ ಆಗಲಿಲ್ಲ
ಚೊಚ್ಚಲ ಬಾರಿಗೆ ವಿಶ್ವಕಪ್ ಕನಸು ಹೊಂದಿರುವ ಆತಿಥೇಯ ಇಂಗ್ಲೆಂಡ್ ಗೆ, ಆಸಿಸ್ ನೀಡಿದ ಟಾರ್ಗೆಟ್ ಸವಾಲು ಎನಿಸಲೇ ಇಲ್ಲ. ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಟೋ ಮೊದಲ ವಿಕೆಟಿಗೆ 124 ರನ್ ಸೇರಿಸಿದ್ರು,. ಈ ಮೂಲಕ ತಂಡದ ಗೆಲುವನ್ನ ಖಚಿತಪಡಿಸಿದ್ರು. ಅದರಲ್ಲೂ 63 ಎಸೆತಗಳಲ್ಲಿ 85 ರನ್ ಸಿಡಿಸಿದ ರಾಯ್, ಆಸಿಸ್ ಬೌಲಿಂಗ್ ಪಡೆಯನ್ನ ಧೂಳಿಪಟ ಮಾಡಿದ್ರು. ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ ನಂತರ ಜೊತೆಯಾದ ಜೋ ರೂಟ್ ಮತ್ತು ಇಯಾನ್ ಮಾರ್ಗನ, 3ನೇ ವಿಕೆಟಿಗೆ ಅರ್ಧ ಶತಕದ ಜೊತೆಯಾಟವಾಡುವ ಮೂಲಕ, ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.
32.1ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡ ಆಂಗ್ಲ ಪಡೆ, 226 ರನ್ ಕಲೆ ಹಾಕಿತು. ಈ ಮೂಲಕ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ, ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೇರಿತು. ಈ ಹಿಂದೆ 1979, 1987 ಹಾಗೂ 1992 ರಲ್ಲಿ ಫೈನಲ್ ತಲುಪಿದ್ದ ಆಂಗ್ಲ ಪಡೆ, ರನ್ನರ್-ಅಪ್ ಆಗಿತ್ತು. ಸದ್ಯ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೇರಿದ್ದು, ಚೊಚ್ಚಲ ವಿಶ್ವಕಪ್ ಗೆಲುವಿನ ಕನಸಿನಲ್ಲಿದೆ. ಮತ್ತೊಂದು ಕಡೆ ಸತತ ಎರಡನೇ ಬಾರಿ ಫೈನಲ್ ತಲುಪಿರುವ ನ್ಯೂಜಿಲೆಂಡ್ ಕೂಡ, ಚೊಚ್ಚಲ ವಿಶ್ವಕಪ್ ಕಿರೀಟವನ್ನ ತನ್ನದಾಗಿಸಿಕೊಳ್ಳಲೂ ಎದುರು ನೋಡುತ್ತಿದೆ. ಹಾಗಾಗಿ ಭಾನುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆಯಲಿರುವ ಫೈನಲ್ ಫೈಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ.
ನಂದನ್ ಸ್ಪೋರ್ಟ್ಸ್ ಬ್ಯೂರೋ ಕರ್ನಾಟಕ ಟಿವಿ