ಪತ್ನಿಯ ಗುಣದಿಂದ, ಪತ್ನಿ ಮಾಡುವ ಉತ್ತಮ ಕೆಲಸದಿಂದ ಹೇಗೆ ಪತಿ ಉದ್ಧಾರವಾಗುತ್ತಾನೋ, ಅದೇ ರೀತಿ ಪತ್ನಿ ಮಾಡುವ ಕೆಲ ತಪ್ಪುಗಳಿಂದ, ಪತಿ ಅವನತಿ ಕಾಣಬಹುದು. ಹಾಗಾದ್ರೆ ಹಿರಿಯರ ಪ್ರಕಾರ, ವಿವಾಹಿತೆ ಮಾಡಬಾರದ ಕೆಲಸಗಳ್ಯಾವುದು ಅಂತಾ ತಿಳಿಯೋಣ ಬನ್ನಿ..
ಹೆಣ್ಣನ್ನ ಗೃಹಲಕ್ಷ್ಮೀ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿವಾಹಿತ ಹೆಣ್ಣು ಮನೆಯನ್ನ ಶುಚಿಯಾಗಿ, ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ನೋಡಿಕೊಳ್ಳುವ ಗುಣ ಹೊಂದಿದ್ದಾಳೆ. ಹಾಗಾಗಿ ಆ ಮನೆಯ ಅವನತಿ, ಉನ್ನತಿ ಎರಡೂ ಆಕೆಯ ಕೈಯಲ್ಲಿದೆ ಅಂತಾರೆ ನಮ್ಮ ಹಿರಿಯರು. ಹಿಂದೂ ಧರ್ಮದ ಪ್ರಕಾರ, ವಿವಾಹಿತೆ ಶೃಂಗಾರ ಮಾಡಿಕೊಂಡಿರಬೇಕಂತೆ.
ಹಾಗಂತ, ಲಿಪಸ್ಟಿಕ್, ಪೌಡರ್ ಬಡ್ಕೊಂಡು ಇರೋದು ಅಂತಾ ಅರ್ಥವಲ್ಲ. ಬದಲಾಗಿ ಕುಂಕುಮ, ಸಿಂಧೂರ, ತಾಳಿ, ಬಳೆ, ಕಾಲುಂಗುರ, ಗೆಜ್ಜೆ, ಮೂಗುಬೊಟ್ಟು, ಇವೆಲ್ಲವನ್ನೂ ಧರಿಸಿರಬೇಕು. ಇದನ್ನೆಲ್ಲ ಧರಿಸುವುದರಿಂದ ಆಕೆಯ ಪತಿಯ ಆಯುಷ್ಯ, ಆರೋಗ್ಯ, ಜೀವನ ಉತ್ತಮವಾಗಿರುತ್ತದೆ ಅನ್ನೋದು ಹಿರಿಯರ ನಂಬಿಕೆ. ಅದರಲ್ಲೂ ಗೆಜ್ಜೆ ಧರಿಸಿ, ಗೃಹಿಣಿ ಮನೆತುಂಬ ನಡೆದಾಡಿದ್ರೆ, ಆ ಮನೆಯಲ್ಲಿ ಸದಾ ಲಕ್ಷ್ಮೀಯ ವಾಸವಿರುತ್ತದೆಯಂತೆ. ಆದ್ರೆ ಇಂದಿನ ಕಾಲದಲ್ಲಿ ಕೆಲವರು ಫ್ಯಾಷನ್ ಹೆಸರಿನಲ್ಲಿ ಬಳೆ, ಕುಂಕುಮ, ತಾಳಿ, ಕಾಲುಂಗುರ ಧರಿಸುವುದನ್ನೇ ಮರೆತಿದ್ದಾರೆ.
ಇನ್ನು ಮುಸ್ಸಂಜೆ ಹೊತ್ತಲ್ಲಿ, ಅಥವಾ ಯಾವುದೇ ಹೊತ್ತಲ್ಲಿ, ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡಿಯಬಾರದು. ಕೆಲ ಹೆಣ್ಣು ಮಕ್ಕಳಿಗೆ ಸಂಜೆಯಾದ ಬಳಿಕ, ಓಣಿ ಮಂದಿಯನ್ನೆಲ್ಲ ಕರೆದು, ಹೊಸ್ತಿಲ ಮೇಲೆ ಕುಳಿತು, ಬೇರೆಯವರನ್ನ ಹೀಯಾಳಿಸುವುದೇ, ಚಾಳಿಯಾಗಿರುತ್ತದೆ. ಅಂಥ ಕೆಲಸ ಮಾಡಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗಂದು ಪ್ರವೇಶಿಸುವುದಿಲ್ಲ. ಸಂಜೆ ವೇಳೆ ಲಕ್ಷ್ಮೀ ಮನೆಗೆ ಬರುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ನೀವು ಹೊಸ್ತಿಲ ಮೇಲೆ ಕುಳಿತು ಆಕೆಗೆ ಅಡ್ಡಿ ಮಾಡಿದರೆ, ಆಕೆ ಮನೆಗೆ ಬರಲು ಹೇಗೆ ಸಾಧ್ಯ. ಈ ಕಾರಣಕ್ಕೆ, ಹೊಸ್ತಿಲ ಮೇಲೆ, ಅಥವಾ ಹೊಸ್ತಿಲ ಬಳಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಎಂದಿದ್ದಾರೆ ಹಿರಿಯರು.
ಇನ್ನು ಕೂದಲು ಬಿಟ್ಟು ತಿರುಗಾಡುವುದು. ಫ್ಯಾಷನ್ ಹೆಸರಿನಲ್ಲಿ ಇಂದು ಹಲವರು ಕೂದಲು ಬಿಟ್ಟು ಓಡಾಡುತ್ತಾರೆ. ಆದ್ರೆ ಮಟ ಮಟ ಮಧ್ಯಾಹ್ನದ ವೇಳೆ ಮತ್ತು ಮುಸ್ಸಂಜೆ ಬಳಿಕ ಕೂದಲು ಬಿಟ್ಟು ಓಡಾಡುವುದು, ಹಿಂದೂ ಪದ್ಧತಿಯಲ್ಲಿ ನಿಷೇಧವೆನ್ನಲಾಗಿದೆ. ಇನ್ನು ಪರಪುರುಷನ ಸಂಗ ಮಾಡುವುದು. ಇದು ಎಲ್ಲ ಧರ್ಮದ ಪ್ರಕಾರ ತಪ್ಪು. ಮದುವೆಯಾದ ಹೆಣ್ಣು, ಕೊನೆತನಕ ಗಂಡನೊಂದಿಗೆ ಉತ್ತಮವಾಗಿ ಸಂಸಾರ ಮಾಡಿಕೊಂಡಿದ್ದರೆ, ಸಮಾಜದಲ್ಲಿ ಆಕೆಗೆ ಉತ್ತಮ ಗೌರವ ಸಿಗುತ್ತದೆ. ಆದ್ರೆ ಪರಪುರುಷನ ಸಂಗ ಮಾಡಿದ್ದಲ್ಲಿ, ಆಕೆ ಎಲ್ಲ ರೀತಿಯ ಕಷ್ಟವನ್ನ ಕೂಡ ಅನುಭವಿಸಬೇಕಾಗುತ್ತದೆ.

