ನಾವು ಧನವಂತರಾಗಬೇಕು ಅಂತಾ ಲಕ್ಷ್ಮೀ ದೇವಿಯನ್ನು ಪೂಜಿಸುತ್ತೇವೆ. ಪ್ರತೀ ಶುಕ್ರವಾರ, ಲಕ್ಷ್ಮೀಯ ಆರಾಧನೆ ಮಾಡುತ್ತೇವೆ. ಮನೆ ಸ್ವಚ್ಛವಾಗಿಟ್ಟು, ಮುಸ್ಸಂಜೆ ಹೊತ್ತಲ್ಲಿ, ದೀಪ ಹಚ್ಚಿ, ಲಕ್ಷ್ಮೀಯನ್ನು ಬರ ಮಾಡಿಕೊಳ್ಳುತ್ತೇವೆ. ಆದ್ರೆ ಇಂಥ ಅದೃಷ್ಟ ಲಕ್ಷ್ಮೀಯ ಅಕ್ಕ ದರಿದ್ರ ಲಕ್ಷ್ಮೀ ಆಗಿದ್ದಾದರೂ ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸಮುದ್ರ ಮಂಥನದ ವೇಳೆ ಲಕ್ಷ್ಮೀ ದೇವಿಯ ಉದ್ಭವವಾಯಿತು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದಕ್ಕಿಂತ ಮುನ್ನ ಸಮುದ್ರ ಮಂಥನದ ವೇಳೆ ಅಲಕ್ಷ್ಮೀಯ ಉದ್ಭವವಾಗಿತ್ತು. ಸಮುದ್ರ ಮಂಥನದ ವೇಳೆ ಪವಿತ್ರವಾದ ವಸ್ತುಗಳ ಉದ್ಭವವಾದ ಹಾಗೆ, ಕೆಟ್ಟ ವಸ್ತುಗಳು ಕೂಡ ಉದ್ಭವವಾದವು. ಮದಿರಾದ ಜೊತೆ ಉದ್ಭವಿಸಿದ ಅಲಕ್ಷ್ಮೀ, ಲಕ್ಷ್ಮೀಗಿಂತ ಮೊದಲೇ ಜನಿಸಿದ್ದಳಾದ್ದರಿಂದ, ಆಕೆಯನ್ನು ಲಕ್ಷ್ಮೀಯ ದೊಡ್ಡಕ್ಕನೆಂದು ಹೇಳಲಾಗುತ್ತದೆ.
ಈಕೆಯನ್ನ ಓರ್ವ ಮುನಿ ಮದುವೆಯಾಗುತ್ತಾರೆ. ನಂತರ ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಆದರೆ ಅಲಕ್ಷ್ಮೀ ಆ ಆಶ್ರಮದಲ್ಲಿ ತಾನು ಉಳಿಯುವುದಿಲ್ಲವೆನ್ನುತ್ತಾಳೆ. ಕಾರಣವೇನೆಂದು ಮುನಿ ಕೇಳಿದಾಗ, ತಾನು ಇಂಥ ಸ್ವಚ್ಛ ಜಾಗದಲ್ಲಿ ಇರುವುದಿಲ್ಲ. ಬದಲಾಗಿ ಧೂಳು, ಕಸದಿಂದ ತುಂಬಿದ ಅಶುದ್ಧವಾದ ಜಾಗವೇ ನನಗಿಷ್ಟ ಎನ್ನುತ್ತಾಳೆ.
ಹೀಗಾಗಿಯೇ ಮನೆಯನ್ನ ಯಾವಾಗಲೂ ಸ್ವಚ್ಛವಾಗಿಡಬೇಕು. ಧೂಳು, ಕಸ, ಅಶುದ್ಧತೆ, ಮಾಂಸ- ಮದಿರೆ ಇರುವ ಜಾಗದಲ್ಲಿ ದರಿದ್ರ ಲಕ್ಷ್ಮೀ ಬರುತ್ತಾಳೆಂದು ಹಿರಿಯರು ಹೇಳುತ್ತಾರೆ. ಅಲ್ಲದೇ, ಸಂಜೆ ದೀಪ ಹಚ್ಚುವ ವೇಳೆ ಹಿಂಬಾಗಿಲು ಬಂದ್ ಮಾಡಿ, ಮುಂಬಾಗಿಲು ತೆರೆದಿಟ್ಟು, ಮನೆಯನ್ನ ಕ್ಲೀನ್ ಮಾಡಿ ಇಡಬೇಕು. ಹೀಗೆ ಮಾಡಿದ್ದಲ್ಲಿ, ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುತ್ತದೆ.
ಅದನ್ನು ಬಿಟ್ಟು ಸಂಜೆ ದೀಪ ಹಚ್ಚಿದ ಬಳಿಕ, ಕಸಗುಡಿಸುವುದು, ತಲೆ ಬಾಚಿಕೊಳ್ಳುವುದು, ಹಿಂಬಾಗಿಲು ತೆರೆದಿಟ್ಟು ಕೂರುವುದು. ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತೆ ಮಾಡುವುದು. ಜಗಳವಾಡುವುದು, ಕೆಟ್ಟದಾಗಿ ಬಯ್ಯುವುದೆಲ್ಲ ಮಾಡಿದ್ರೆ, ಲಕ್ಷ್ಮೀ ಮನೆಗೆ ಬರುವಬದಲು, ದರಿದ್ರ ಲಕ್ಷ್ಮೀ ಮನೆಗೆ ಬರುತ್ತಾಳೆ.