ಮನುಷ್ಯ ಸತ್ತ ಬಳಿಕ ಸ್ವರ್ಗಕ್ಕೆ ಹೋಗುತ್ತಾನೆ ಅಥವಾ ನರಕಕ್ಕೆ ಹೋಗುತ್ತಾನೆ. ಆದ್ರೆ ಓರ್ವನ ಸ್ಥಿತಿ ಹೇಗಿತ್ತೆಂದರೆ, ಅವನು ಸ್ವರ್ಗಕ್ಕೂ ಹೋಗಲಿಲ್ಲ, ನರಕಕ್ಕೂ ಹೋಗಲಿಲ್ಲ, ತಿರುಗಿ ಭೂಮಿಗೂ ಬರಲಾಗಲಿಲ್ಲ. ಅಂಥ ಪರಿಸ್ಥಿತಿ ಬಂದಿತ್ತು. ಅವನೇ ತ್ರಿಶಂಕು. ಯಾರಾದರೂ ಕೆಲಸ ಮಾಡಲು ಹೋಗಿ, ಅರ್ಧಕ್ಕೆ ಸಿಕ್ಕಿಹಾಕಿಕೊಂಡರೆ, ಅಂಥವರಿಗೆ ಅವನದ್ದು ತ್ರಿಶಂಕು ಪರಿಸ್ಥಿತಿಯಾಗಿ ಹೋಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಈ ತ್ರಿಶಂಕು ಅಂದ್ರೆ ಯಾರು..? ಅವನ್ಯಾಕೆ ನರಕಕ್ಕೂ ಹೋಗದೇ, ಸ್ವರ್ಗವೂ ಸೇರದೇ, ಭೂಮಿಗೂ ಬರಲಾಗದೇ ಮಧ್ಯದಲ್ಲೇ ಉಳಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ರಾಮನ ಪೂರ್ವಜ, ಸೂರ್ಯವಂಶದ ರಾಜ ತ್ರಿಶಂಕು. ತ್ರಿಶಂಕುವಿನ ನಿಜವಾದ ಹೆಸರು ಸತ್ಯವೃತ. ಸತ್ಯವೃತ ವೃದ್ಧನಾದಾಗ, ತನ್ನ ರಾಜ್ಯಭಾರವನ್ನು ಮಗನಾದ ರಾಜಾ ಹರಿಶ್ಚಂದ್ರನಿಗೆ ಕೊಡಲು ನಿಶ್ಚಯಿಸಿದ. ಇನ್ನು ತ್ರಿಶಂಕುವಿಗೆ ಸತ್ತು ನಂತರ ಸ್ವರ್ಗ ಸೇರುವುದು ಇಷ್ಟವಿರಲಿಲ್ಲ. ಬದಲಾಗಿ ಸಶರೀರವಾಗಿ ಸ್ವರ್ಗ ಸೇರುವ ತವಕವಿತ್ತು. ಆದ್ರೆ ಇದು ಅಷ್ಟು ಸುಲಭವಲ್ಲ ಅನ್ನೋದು ಅವನಿಗೆ ಗೊತ್ತಿತ್ತು.
ಇದಕ್ಕಾಗಿ ತ್ರಿಶಂಕು ವಸಿಷ್ಟ ಮುನಿಗಳ ಬಳಿ ಹೋಗಿ, ಇದಕ್ಕಾಗಿ ಯಜ್ಞ ಮಾಡಲು ವಿನಂತಿಸಿದ. ಆದ್ರೆ ವಸಿಷ್ಠರು ಇದಕ್ಕೆ ನಿರಾಕರಿಸಿದರು. ಆಗ ತ್ರಿಶಂಕು, ವಸಿಷ್ಠರ ಪುತ್ರರ ಬಳಿ ಹೋಗಿ, ಯಜ್ಞ ಮಾಡುವಂತೆ ಹೇಳಿದ. ಅವರು ಕೂಡ ಇದಕ್ಕೆ ನಿರಾಕರಿಸಿದರು. ಆಗ ಕೋಪಗೊಂಡ ತ್ರಿಶಂಕು ಅಲ್ಲಿದ್ದ ಎಲ್ಲರನ್ನೂ ಬೈಯ್ಯಲು ಶುರು ಮಾಡಿದ. ಇದಕ್ಕೆ ಕೋಪಗೊಂಡ ವಸಿಷ್ಠರ ಪುತ್ರರು, ನೀನು ಚಾಂಡಾಳನಾಗು ಎಂದು ತ್ರಿಶಂಕುವಿಗೆ ಶಾಪ ನೀಡಿದರು.
ತ್ರಿಶಂಕು ಚಾಂಡಾಳನಾಗಿ ಮಾರ್ಪಟ್ಟ, ಕೊರಳಲ್ಲಿ ಹಾರದ ಬದಲಿಗೆ ರುಂಡದ ಮಾಲೆ ಬಂತು. ಅವನ ಇಡೀ ದೇಹ ವಿಕಾರವಾಯಿತು. ಇದನ್ನು ಕಂಡ ತ್ರಿಶಂಕು ಇದಕ್ಕೆ ಪರಿಹಾರ ಹುಡುಕುವ ಬದಲು, ಮತ್ತೂ ಸಶರೀರವಾಗಿ ಸ್ವರ್‌ಗಕ್ಕೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದ. ಆಗ ವಿಶ್ವಾಮಿತ್ರರ ಬಳಿ ಹೋದ ತ್ರಿಶಂಕು, ಯಜ್ಞ ಮಾಡುವಂತೆ ಕೇಳಿದ. ವಿಶ್ವಾಮಿತ್ರರು ಯಜ್ಞ ಮಾಡಲು ಒಪ್ಪಿಕೊಂಡರು. ಹಾಗಾದರೆ, ವಿಶ್ವಾಮಿತ್ರರು ಮಾಡಿದ ಯಜ್ಞದಿಂದ ತ್ರಿಶಂಕು ಸಶರೀರವಾಗಿ ಸ್ವರ್ಗ ಸೇರಿದನೇ..? ಮುಂದೇನಾಯಿತು ಎಂಬ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..