ಹಿಂದಿನ ಭಾಗದಲ್ಲಿ ನಾವು ವಸಿಷ್ಟರು ಮತ್ತು ಅವರ ಪುತ್ರರು ಯಜ್ಞ ಮಾಡಲು ಒಪ್ಪದ ಕಾರಣ, ತ್ರಿಶಂಕು ಅವರಿಗೆ ಬೈದು, ಶಾಪ ಗಿಟ್ಟಿಸಿಕೊಂಡು, ಚಾಂಡಾಳನಾಗಿ. ನಂತರ ವಿಶ್ವಾಮಿತ್ರರ ಬಳಿ ಹೋಗಿ, ಯಜ್ಞ ಮಾಡಲು ವಿನಂತಿಸಿಕೊಂಡ ಬಗ್ಗೆ ಕೇಳಿದ್ದೆವು. ಇದೀಗ ಯಜ್ಞ ಮಾಡಲು ಒಪ್ಪಿದ ವಿಶ್ವಾಮಿತ್ರರು, ಯಜ್ಞವನ್ನ ಪೂರ್ಣಗೊಳಿಸಿದರೇ..? ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗ ಸಿಕ್ಕಿತೇ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವಿಶ್ವಾಮಿತ್ರರು ತಮ್ಮ ಮಕ್ಕಳನ್ನು ಕರೆದು ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ತರಲು ಹೇಳಿದರು. ನಂತರ ಎಲ್ಲ ಋಷಿಗಳಿಗೆ ಆಮಂತ್ರಣ ಹೇಳಿ ಕಳುಹಿಸಿದರು. ಎಲ್ಲ ಋಷಿಗಳು ಬರಲೊಪ್ಪಿದರು, ಆದ್ರೆ ವಸಿಷ್ಟ ಮುನಿಗಳ ಪುತ್ರರು ಮಾತ್ರ ಬರಲಿಲ್ಲ. ಕಾರಣ ಕೇಳಿದಾಗ, ಓರ್ವ ಚಾಂಡಾಳ ಮತ್ತು ಓರ್ವ ಕ್ಷತ್ರೀಯ ಪುರೋಹಿತ, ಇರುವ ಯಜ್ಞಕ್ಕೆ ನಾವು ಬರುವುದಿಲ್ಲ ಎಂದು ಹೇಳಿದರು. ಈ ಮಾತಿಗೆ ವಿಶ್ವಾಮಿತ್ರರು ತೀವ್ರ ಕ್ರೋಧಿತರಾದರು.
ನನ್ನನ್ನು ಅವಮಾನಿಸಿದ ವಸಿಷ್ಠರ ಪುತ್ರರು ಇನ್ನು ಏಳ್ನೂರು ವರ್ಷಗಳ ಕಾಲ ಚಾಂಡಾಳ ಯೋನಿಯಲ್ಲೇ ಜನ್ಮ ಪಡಿಯಲಿ ಮತ್ತು ಅವರಿಗೆ ತಿನ್ನಲು ಬರೀ ನಾಯಿ ಮಾಂಸವೇ ಸಿಗಲಿ ಎಂದು ಶಾಪ ಹಾಕುತ್ತಾರೆ. ಶಾಪ ತಟ್ಟಿದ ಬಳಿಕ, ವಸಿಷ್ಠರ ಪುತ್ರರು ಯಮಲೋಕಕ್ಕೆ ಹೋಗುತ್ತಾರೆ. ಈ ವಿಷಯ ತಿಳಿದ ಇತರ ಋಷಿಗಳು ಬೇಗನೇ ಯಜ್ಞಕ್ಕೆ ಬರುತ್ತಾರೆ.
ಆದ್ರೆ ಯಜ್ಞವೆಲ್ಲ ಮುಗಿದು, ನೈವೇದ್ಯವನ್ನು ಸೇವಿಸಲು ವಿಶ್ವಮಿತ್ರರು ದೇವತೆಗಳಿಗೆ ಕರೆದಾಗ, ಯಾವ ದೇವತೆಗಳೂ ಪ್ರಕಟವಾಗಲಿಲ್ಲ. ಹೀಗಾಗಿ ತಮ್ಮ ಶಕ್ತಿಯಿಂದಲೇ ತ್ರಿಶಂಕುವನ್ನು ವಿಶ್ವಾಮಿತ್ರರು ಸ್ವರ್ಗಕ್ಕೆ ಕಳುಹಿಸುತ್ತಾರೆ. ಆದ್ರೆ ಸ್ವರ್ಗಕ್ಕೆ ಬಂದ ತ್ರಿಶಂಕುವನ್ನು ನೋಡಿ, ಇಂದ್ರ ಕೋಪಗೊಳ್ಳುತ್ತಾರೆ. ಬೈದು ಮತ್ತೆ ಭೂಮಿಗೆ ಕಳುಹಿಸುತ್ತಾನೆ. ಆಗ ತ್ರಿಶಂಕು ವಿಶ್ವಾಮಿತ್ರರನ್ನು ಸ್ಮರಿಸುತ್ತಾನೆ. ಆಗ ವಿಶ್ವಾಮಿತ್ರರು ತಮ್ಮ ಶಕ್ತಿಯಿಂದ ಸ್ವರ್ಗ ಮತ್ತು ಭೂಮಿಯ ಮಧ್ಯದಲ್ಲೇ ಇನ್ನೊಂದು ಸ್ವರ್ಗವನ್ನು ನಿರ್ಮಿಸಿ, ಅದರಲ್ಲಿ ತ್ರಿಶಂಕು ಇರುವಂತೆ ಮಾಡುತ್ತಾರೆ. ಹಾಗಾಗಿಯೇ ಅದನ್ನು ತ್ರಿಶಂಕು ಸ್ವರ್ಗ ಎಂದು ಕರೆಯುತ್ತಾರೆ.