International Political News: ಅಮೆರಿಕ ಫಸ್ಟ್ ಎನ್ನುವ ನೀತಿಗೆ ಬದ್ದರಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ ಬಳಿಕ ತನ್ನ ನೆರೆಯ ದೇಶಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಅಲ್ಲದೆ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಭಾರತವು ಹೇರುತ್ತಿದೆ. ಇದಕ್ಕೆ ಪ್ರತಿಯಾಗಿ ಬರುವ ಏಪ್ರಿಲ್ 2 ರಿಂದ ರೆಸಿಪ್ರೋಕಲ್ ಟ್ಯಾಕ್ಸ್ ಅಂದರೆ ಪ್ರತೀಕಾರದ ತೆರಿಗೆಯನ್ನು ವಿಧಿಸುವುದಾಗಿ ಈಗಾಗಲೇ ಟ್ರಂಪ್ ಘೋಷಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಇದೀಗ ಭಾರತ ಜಾಣ ನಡೆಯನ್ನು ಅನುಸರಿಸಿದೆ. ತನ್ನ ತೆರಿಗೆ ನೀತಿಯಿಂದ ಅಸಮಾಧಾನದಲ್ಲಿರುವ ಅಮೆರಿಕ ಅಧ್ಯಕ್ಷರನ್ನು ಸಮಾಧಾನಗೊಳಿಸಲು ಭಾರತ ಮುಂದಾಗಿದೆ.
33 ತಿದ್ದುಪಡಿಗಳ ವಿಧೇಯಕ..
ಅಂದಹಾಗೆ ಹೇಳಿ ಕೇಳಿ ಆಘಾತಕಾರಿ ನಿರ್ಣಯಗಳನ್ನು ಪಡೆಯುವಲ್ಲಿ ಟ್ರಂಪ್ ಎತ್ತಿದ ಕೈ, ಹೀಗಿರುವಾಗ ನಮ್ಮ ತೆರಿಗೆ ನೀತಿಯಿಂದ ಇನ್ನಷ್ಟು ಪರಿಸ್ಥಿತಿ ಹದಗೆಡಬಾರದು ಎಂದು ಯೋಚಿಸಿರುವ ಭಾರತವು, ಗೂಗಲ್ ಹಾಗೂ ಇ-ಕಾಮರ್ಸ್ ಸೇವೆಗಳನ್ನು ನೀಡುವ ವಿದೇಶಿ ಕಂಪನಿಗಳ ಜಾಹೀರಾತುಗಳ ಮೇಲೆ ವಿಧಿಸಲಾಗುತ್ತಿದ್ದ ಶೇ.6ರಷ್ಟು ತೆರಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಅಲ್ಲದೆ ಇದಕ್ಕಾಗಿ, 2025ರ ಹಣಕಾಸು ವಿಧೇಯಕಕ್ಕೆ 33 ತಿದ್ದುಪಡಿಗಳನ್ನು ತರಲು ಮುಂದಾಗಿದೆ.
ಯಾವೆಲ್ಲ ಕಂಪೆನಿಗಳಿಗೆ ಲಾಭ..?
ಇನ್ನೂ ಗೂಗಲ್, ಫೇಸ್ ಬುಕ್ ಸೇರಿದಂತೆ ವಿದೇಶಿ ಕಂಪನಿಗಳಿಗೆ ಈ ತೆರಿಗೆ ಅನ್ವಯವಾಗುತ್ತಿತ್ತು. ಅಲ್ಲದೆ ತೆರಿಗೆ ವಲಯದಲ್ಲಿ ಗೂಗಲ್ ಟ್ಯಾಕ್ಸ್ ಎಂದೇ ಕರೆಯಲಾಗುತ್ತಿದ್ದ ಈ ಮಾದರಿಯನ್ನು ಮೋದಿ ಸರ್ಕಾರ ಕೈಬಿಟ್ಟಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಮಾರ್ಚ್ 24ರಂದು ಲೋಕಸಭೆಯಲ್ಲಿ ಮಂಡಿಸಿದ್ದ ಈ ಕುರಿತ ಮಸೂದೆಯಲ್ಲಿ ಗೂಗಲ್ ತೆರಿಗೆ ಕೈಬಿಡುವ ಪ್ರಸ್ತಾವನೆಯೊಂದನ್ನು ಉಲ್ಲೇಖಿಸಲಾಗಿತ್ತು.
ಅಂದಹಾಗೆ ಪ್ರಮುಖವಾಗಿ ಟ್ರಂಪ್ ಚಾಟಿಯಿಂದ ತಪ್ಪಿಸಿಕೊಳ್ಳಲು ಶೇ.6ರಷ್ಟು ತೆರಿಗೆ ರದ್ದು ಮಾಡಿರುವ ಭಾರತ ಸರ್ಕಾರದ ಈ ನಿರ್ಧಾರದಿಂದ ಯಾರಿಗೆಲ್ಲ ಲಾಭವಾಗಲಿದೆ ಎನ್ನುವುದನ್ನು ನೋಡುವುದಾದರೆ. ಗೂಗಲ್, ಮೆಟಾ ಹಾಗೂ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಎಕ್ಸ್‌ಗೆ ತುಂಬಾ ಪ್ರಯೋಜನವಾಗಲಿದೆ. ಇನ್ನೂ ಭಾರತೀಯರಲ್ಲದವರ ಡಿಜಿಟಲ್ ವ್ಯಾಪಾರಗಳಿಗೆ 2016ರಲ್ಲಿ ಈ ತೆರಿಗೆಯನ್ನು ಜಾರಿಗೆ ತರಲಾಗಿತ್ತು. ಅದೇ ವರ್ಷದ ಜೂನ್ 1ರಿಂದ ಅನುಷ್ಠಾನಕ್ಕೆ ಬಂದಿತ್ತು. ಆದರೆ ಸಂಸತ್ ಈ ನೂತನ ತಿದ್ದುಪಡಿಯನ್ನು ಅಂಗೀಕರಿಸಿದರೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಆದರೆ, ಟ್ರಂಪ್ ಮೆಚ್ಚಿಸಲು, ಗೂಗಲ್ ತೆರಿಗೆ ಮನ್ನಾದಿಂದ ಉಳಿಯುವ ಅಪಾರ ಪ್ರಮಾಣದ ಆದಾಯವನ್ನು ವಿದೇಶಿ ಕಂಪನಿಗಳಿಗೆ ಬಿಟ್ಟುಕೊಡಲೂ ಭಾರತ ಸಿದ್ಧವಿಲ್ಲ. ಹಾಗಾಗಿಯೇ ಆ ಹಣವನ್ನು ಡಿಕ್ಲೇರ್ ಮಾಡಲಾಗದೇ ಉಳಿದ ಆದಾಯ ಎಂದು ವರ್ಗೀಕರಿಸಿದೆ. ಆ ಹಣಕ್ಕೆ ತೆರಿಗೆ ಬೀಳಬಾರದು ಎಂದಾದರೆ ಆ ಹಣವನ್ನು ವಿದೇಶಿ ಕಂಪನಿಗಳು ಭಾರತಲ್ಲೇ ಮರು ಹೂಡಿಕೆ ಮಾಡಬೇಕಾಗುತ್ತದೆ. ಇದೊಂದು ಟ್ಯಾಕ್ಟಿಕ್ಸ್ ಅನ್ನು ಭಾರತ ಅಳವಡಿಸಿಕೊಂಡಿದೆ. ಈ ನಿಟ್ಟಿನಲ್ಲಿ ಒಂದೇ ಬಾಣದಲ್ಲಿ ಎರಡು ಹಕ್ಕಿ ಹೊಡೆಯುವಂಥ ಬುದ್ಧಿವಂತಿಕೆಯನ್ನು ಭಾರತ ಕೈಗೊಂಡಿದೆ.