Spiritual: ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ರಥಯಾತ್ರೆ ವಿಶ್ವಪ್ರಸಿದ್ಧವಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಈ ಯಾತ್ರೆಗೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಇಲ್ಲಿನ ವಿಶೇಷತೆ ಅಂದ್ರೆ, ಇಲ್ಲಿ ಬರೀ ಶ್ರೀಕೃಷ್ಣನನ್ನಷ್ಟೇ ಅಲ್ಲದೇ, ಸಹೋದರನಾದ ಬಲರಾಮ ಮತ್ತು ಸಹೋದರಿಯಾದ ಸುಭದ್ರೆಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಭಾರತದ ಪ್ರಸಿದ್ಧ ಪ್ರಾಚೀನ ದೇವಸ್ಥಾನಗಳಲ್ಲಿ ಪುರಿ ಜಗನ್ನಾಥ ಮಂದಿರ ಕೂಡ ಒಂದು. ಚಾರ್ ಧಾಮ್ ಯಾತ್ರೆಗಳಲ್ಲಿ ಪುರಿ ಜಗನ್ನಾಥ ಮಂದಿರ ಕೂಡ ಒಂದು. ಜೀವಮಾನದಲ್ಲಿ ಒಮ್ಮೆಯಾದರೂ ಹಿಂದೂಗಳು ಭೇಟಿ ನೀಡಬೇಕಾದ ಸ್ಥಳವಿದು. ಈ ಮೊದಲೇ ಹೇಳಿದಂತೆ ಇಡೀ ಪ್ರಪಂಚದಲ್ಲಿ ಇದೊಂದೇ ದೇವಸ್ಥಾನದಲ್ಲಿ ಕೃಷ್ಣನನ್ನು ಬಲರಾಮ ಮತ್ತು ಸುಭದ್ರೆಯೊಂದಿಗೆ ಪೂಜಿಸುತ್ತಾರೆ. ಇಲ್ಲಿನ ದೇವಸ್ಥಾನದ ಇನ್ನೊಂದು ವಿಶೇಷತೆ ಅಂದ್ರೆ, ಎಲ್ಲ ಕಡೆಗಳಲ್ಲಿ ದೇವರ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿರುತ್ತಾರೆ. ಆದರೆ ಇಲ್ಲಿನ ಮೂರ್ತಿಗಳನ್ನು ಮರದಿಂದ ಕೆತ್ತಲಾಗಿದೆ.
ಮತ್ತು ಹತ್ತು ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ನಡೆಯುವ ಪುರಿ ಜಗನ್ನಾಥ ಯಾತ್ರೆಯ ವೇಳೆ ಈ ಮರದ ಮೂರ್ತಿಗಳನ್ನು ಬದಲಾಯಿಸಿ, ಹೊಸ ಮರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಪುರಿ ಜಗನ್ನಾಥ ಇಲ್ಲಿ ಬಂದು ಹೇಗೆ ನೆಲೆನಿಂತ ಎನ್ನುವುದಕ್ಕೆ ಕಥೆ ಇದೆ. ಬಲರಾಮ ಮತ್ತು ಸುಭದ್ರೆಯ ತಾಯಿ ರೋಹಿಣಿ, ಶ್ರೀಕೃಷ್ಣನ ಬಾಲಲೀಲೆಗಳನ್ನು ಕುರಿತು ತನ್ನ ಸಖಿಯರೊಂದಿಗೆ ಗುಣಗಾನ ಮಾಡುತ್ತಿರುತ್ತಾಳೆ. ಇದನ್ನು ಹೊರಗೆ ನಿಂತ ಶ್ರೀಕೃಷ್ಣ, ಬಲರಾಮ ಮತ್ತು ಸುಭದ್ರೆ ತಲ್ಲೀನತೆಯಿಂದ ಕೇಳಿಸಿಕೊಳ್ಳುತ್ತಿರುತ್ತಾರೆ.
ಈ ದೃಶ್ಯ ಅದೆಷ್ಟು ಸುಂದರವಾಗಿತ್ತು ಎಂದರೆ, ನಾರದರು ಅಲ್ಲಿಗೆ ಬಂದು, ನೀವು ಹೇಗೆ ನಿಮ್ಮ ಗುಣಗಾನ ಕೇಳುತ್ತ, ಇಷ್ಟು ತಲ್ಲೀನರಾಗಿದ್ದೀರೋ, ಅದೇ ರೀತಿ ನಿಮ್ಮ ಸಹೋದರ ಮತ್ತು ಸಹೋದರಿಯೊಂದಿಗೆ ನೀವು ಭಕ್ತರಿಗೆ ದರ್ಶನ ಕೊಡಬೇಕು ಎಂದು ಬೇಡಿಕೊಳ್ಳುತ್ತಾರೆ. ಹಾಗಾಗಿ ಶ್ರೀಕೃಷ್ಣ ಜಗನ್ನಾಥನ ರೂಪ ತಾಳಿ, ಪುರಿಯಲ್ಲಿ ಬಂದು ನೆಲೆಸುತ್ತಾನೆ.
ಪುರಿ ಜಗನ್ನಾಥ ರಥಯಾತ್ರೆ ನಡೆಯುವ 15 ದಿನ ಮುನ್ನ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ. ಮತ್ತು ದರ್ಶನಕ್ಕೆ ಅನುಮತಿ ಕೊಡುವುದಿಲ್ಲ. ಏಕೆಂದರೆ, ಈ 15 ದಿನ ಜಗನ್ನಾಥ ಅನಾರೋಗ್ಯದಿಂದಿರುತ್ತಾನೆ ಎಂಬ ನಂಬಿಕೆ ಇರುವ ಕಾರಣಕ್ಕೆ, ಈ 15 ದಿನಗಳ ಕಾಲ ಜಗನ್ನಾಥನಿಗೆ ಕಶಾಯಗಳ ನೈವೇದ್ಯ ಮಾಡಲಾಗುತ್ತದೆ. 56 ವಿಧದ ಭೋಜನವನ್ನು ನೈವೇದ್ಯ ಮಾಡಲಾಗುವುದಿಲ್ಲ. ಅಲ್ಲದೇ ಕೆಲ ಗಿಡಮೂಲಿಕೆಗಳನ್ನು ಸಹ ನೈವೇದ್ಯ ಮಾಡುತ್ತಾರೆ. 16ನೇಯ ದಿನ ರಥಯಾತ್ರೆಗೆ ಚಾಲನೆ ಸಿಗುತ್ತದೆ. ಇದರ ಮುನ್ನಾದಿನ ಈ ರಾಜ್ಯದ ರಾಜ, ರಥಬೀದಿಯಲ್ಲಿ ಚಿನ್ನದ ಕಸಬರಿಗೆಯಿಂದ ಬೀದಿಯನ್ನು ಗುಡಿಸುವ ಪದ್ಧತಿಯೂ ಇದೆ.