- Spiritual: ಕೇರಳದಲ್ಲಿರುವ ಗುರುವಾಯೂಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿ ಶ್ರೀಕೃಷ್ಣನನ್ನೇ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶ್ರೀಕೃಷ್ಣನನ್ನು ಏಕೆ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಕಥೆ ಏನು ಅಂತಾ ತಿಳಿಯೋಣ ಬನ್ನಿ..
ಗುರುವಾಯೂರಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಬಾಲಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಗುರು ಬ್ರಹಸ್ಪತಿ ಮತ್ತು ವಾಯುದೇವ ಸೇರಿ, ಈ ಕೃಷ್ಣನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ ಕಾರಣ, ಈ ದೇವರಿಗೆ ಗುರುವಾಯೂರಪ್ಪ ಎಂದು ಹೆಸರು ಬಂದಿದೆ. ಮತ್ತು ಇಲ್ಲಿ ಗುರುವಾಯೂರಪ್ಪ ಇರುವ ಕಾರಣಕ್ಕೆ, ಈ ಊರಿಗೆ ಗುರುವಾಯೂರು ಎಂಬ ಹೆಸರು ಬಂದಿದೆ.
ಈ ದೇವಸ್ಥಾನವನ್ನು ದಕ್ಷಿಣದ ದ್ವಾರಕೆ ಅಂತಲೂ ಕರೆಯುತ್ತಾರೆ. ಏಕೆಂದರೆ ಇಲ್ಲಿರುವ ಕೃಷ್ಣನ ಮೂರ್ತಿಯನ್ನು ದ್ವಾರಕೆಯಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ ಗುರುವಾಯೂರನ್ನು ದಕ್ಷಿಣ ದ್ವಾರಕೆ ಎಂದು ಕರೆಯುತ್ತಾರೆ. ಅದು ಹೇಗೆ ದ್ವಾರಕೆಯಿಂದ ಇಲ್ಲಿಗೆ ಬಂತು ಅನ್ನುವ ಬಗ್ಗೆ ಕಥೆ ಇದೆ. ಈ ಮೂರ್ತಿ 5 ಸಾವಿರ ವರ್ಷಗಳಷ್ಟು ಹಳೆಯದ್ದಾಗಿದ್ದು, ಪುರಾಣ ಕಥೆಗಳ ಪ್ರಕಾರ, ಈ ವಿಗ್ರಹದಲ್ಲಿ ಸ್ವತಃ ಕೃಷ್ಣನ ಅಂಶವೇ ಇದೆ ಎನ್ನಲಾಗಿದೆ.
ಈ ಮೂರ್ತಿ ಶ್ರೀಕೃಷ್ಣನ ಬಳಿಯೇ ಇದ್ದಿದ್ದು, ಶ್ರೀಕೃಷ್ಣ ಭೂಲೋಕ ತ್ಯಜಿಸಿ, ಸ್ವರ್ಗಕ್ಕೆ ಹೋಗುವಾಗ, ಈ ಮೂರ್ತಿಯನ್ನು ಬ್ರಹಸ್ಪತಿಗೆ ಕೊಡಬೇಕು ಎಂದು ಉದ್ಧವನಿಗೆ ಹೇಳಿದನಂತೆ. ಉದ್ಧವ ದ್ವಾರಕೆಯಲ್ಲಿದ್ದ. ಉದ್ದವನಿಂದ ಬ್ರಹಸ್ಪತಿ ಈ ಮೂರ್ತಿ ತೆಗೆದುಕೊಳ್ಳಲು ದ್ವಾರಕೆಗೆ ಆಗಮಿಸುತ್ತಿದ್ದರು. ಈ ವೇಳೆ ದ್ವಾರಕೆ ನೀರಿನಲ್ಲಿ ಮುಳುಗಿ ಹೋಗಿತ್ತು. ಕೃಷ್ಣನ ಈ ವಿಗ್ರಹವೂ ಮುಳುಗಿತ್ತು. ಆಗ ಬ್ರಹಸ್ಪತಿ, ವಾಯುವಿನ ಸಹಾಯದಿಂದ ಈ ವಿಗ್ರಹವನ್ನು ಮೇಲಕ್ಕೆ ತಂದರು. ಮತ್ತು ಇದನ್ನು ಒಂದು ಅತ್ಯುತ್ತಮವಾದ ಜಾಗದಲ್ಲಿ ಪ್ರತಿಷ್ಠಾಪಿಸಬೇಕೆಂದು ನಿರ್ಧರಿಸಿದರು.
ಹೀಗೆ ಸ್ಥಳ ಹುಡುಕಿಕೊಂಡು ಕೇರಳಕ್ಕೆ ಹೋದಾಗ ಅಲ್ಲಿ ಇವರನ್ನು ಭೇಟಿಯಾದ ಪರಶುರಾಮ, ರುದ್ರತೀರ್ಥವೆಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ, ಆ ಸ್ಥಳದ ವಿವರಣೆ ನೀಡಿದನಂತೆ. ಹಾಗಾಗಿ ಇದೇ ಸ್ಥಳದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಬೇಕೆಂದು ನಿರ್ಧರಿಸಿ, ಗುರುವಾಯೂರಿನಲ್ಲಿ ಗುರುವಾಯೂರಪ್ಪನನ್ನು ಪ್ರತಿಷ್ಠಾಪಿಸಲಾಯಿತು.
ಇನ್ನು ದೇವಸ್ಥಾನದ ಬಗ್ಗೆ ಹೇಳುವುದಾದರೆ, ಇಲ್ಲಿನ ಶಿಲ್ಪಕಲೆ ಸುಂದರವಾಗಿದ್ದು, ಇದು ಭಾರತದ ಪ್ರಸಿದ್ಧ ಮತ್ತು ಪ್ರಾಚೀನ ದೇವಸ್ಥಾನಗಳಲ್ಲೊಂದು. ಇಲ್ಲಿನ ದೇವಸ್ಥಾನದ ಮೇಲೆ ಶ್ರೀಕೃಷ್ಣನ ಜೀವನದ ವರ್ಣ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಒಂದು ಕೋಣೆ ಇದ್ದು, ಅಲ್ಲಿರುವ ಚಿನ್ನಾಭರಣವನ್ನು ಹೇಗೆ ವಾಸುಕಿ ರಕ್ಷಿಸುತ್ತಿದ್ದಾನೆಂದು ಹೇಳಲಾಗುತ್ತದೆಯೋ, ಅದೇ ರೀತಿ, ಗುರುವಾಯೂರಪ್ಪ ದೇವಸ್ಥಾನದಲ್ಲೂ ಒಂದು ಕೋಣೆ ಇದೆ. ಅಲ್ಲಿಯೂ ಚಿನ್ನಾಭರಣ, ವಜ್ರ ವೈಢೂರ್ಯವಿದ್ದು, ಅದನ್ನು ಪಂಚನಾಗಗಳು ರಕ್ಷಿಸುತ್ತಿದ್ದಾರೆಂದು ಹೇಳಲಾಗಿದೆ. ಹಾಗಾಗಿ ಆ ಕೋಣೆಯ ಬಾಗಿಲನ್ನೂ ಯಾರೂ ತೆಗೆಯುವ ಸಾಹಸಕ್ಕೆ ಕೈ ಹಾಕಿಲ್ಲ.