Spiritual: ಉತ್ತರ ಪ್ರದೇಶದಲ್ಲಿರುವ ಮಥುರಾ ಶ್ರೀಕೃಷ್ಣನ ಜನ್ಮಸ್ಥಳ ಎಂಬುದು ಎಲ್ಲರಿಗೂ ಗೊತ್ತು. ಈ ಮಥುರೆಯಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ಮಥುರಾ ಶ್ರೀಕೃಷ್ಣ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ.
ಉತ್ತರಪ್ರದೇಶದ ಯಮುನಾ ನದಿ ತೀರದಲ್ಲಿ ಮಥುರಾ ಪಟ್ಟಣದಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಮಥುರೆಯ ಕಂಸನ ಅರಮನೆಯ ಕಾರಾಗೃಹದಲ್ಲೇ ಶ್ರೀಕೃಷ್ಣ, ದೇವಕಿಯ ಗರ್ಭದಲ್ಲಿ 8ನೇ ಮಗುವಾಗಿ ಜನ್ಮ ತಾಳಿದ್ದ. ಬಳಿಕ ವಸುದೇವ, ಮಧ್ಯರಾತ್ರಿಯ ವೇಳೆ ಬುಟ್ಟಿಯಲ್ಲಿ ಶ್ರೀಕೃಷ್ಣನನ್ನು ತೆಗೆದುಕೊಂಡು ಗೋಕುಲಕ್ಕೆ ಹೋಗಿ, ಅಲ್ಲಿ ಯಶೋಧೆಯ ಮಡಿಲಿಗೆ ಹಾಕಿ ಬರುತ್ತಾನೆ. ಬಲರಾಮ, ಯಶೋಧಾ, ನಂದಗೋಪನೊಂದಿಗೆ ಶ್ರೀಕೃಷ್ಣ ಆಡಿ ಬೆಳೆಯುತ್ತಾನೆ. ಬಳಿಕ ಮತ್ತೆ ಬಲರಾಮನೊಂದಿಗೆ ಮಥುರೆಗೆ ಬಂದ ಶ್ರೀಕೃಷ್ಣ, ಮಲ್ಲಯುದ್ಧದಲ್ಲಿ ಕಂಸನನ್ನು ಸಂಹರಿಸುತ್ತಾನೆ.
ಈ ರೀತಿ ಕಂಸನಿಂದ ಮಥುರಾ ಮುಕ್ತವಾಗುತ್ತದೆ. ಇನ್ನು ಇಂದು ಮಥುರಾ ದೇವಾಲಯಗಳ ಪಟ್ಟಣವಾಗಿದೆ. ಇಲ್ಲಿ, ಶ್ರೀಕೃಷ್ಣ ಮತ್ತು ರಾಧೆಗೆ ಸಂಬಂಧಿಸಿದ ಹಲವು ದೇವಸ್ಥಾನಗಳಿದೆ. ಶ್ರೀಕೃಷ್ಣನ ಜೀವನಗಾಥೆ ತೋರಿಸುವ, ಕಲಾಕೃತಿಗಳಿದೆ. ಇನ್ನು ಮಥುರಾದಲ್ಲಿ ಹೋಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಸಿಗುವ ಮಥುರಾ ಪೇಡ ಎಂಬ ಸಿಹಿ ತಿಂಡಿ ವಿಶ್ವಪ್ರಸಿದ್ಧವಾಗಿದೆ.

