Spiritual: ಚಾರ್‌ಧಾಮ್ ಗಳಲ್ಲಿ ಒಂದಾದ ದ್ವಾರಕೆಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಗುಜರಾತ್‌ನ ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಶ್ರೀಕೃಷ್ಣನ ಮೊಮ್ಮಗ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ದ್ವಾರಕೆಯ ದ್ವಾರಕಾಧೀಶ ದೇವಸ್ಥಾನದ ಬಗ್ಗೆ ಹಲವಾರು ಮಾಹಿತಿ ತಿಳಿಯೋಣ ಬನ್ನಿ..
ಗುಜರಾತ್‌ನ ದ್ವಾರಕೆಯಲ್ಲಿ ಈ ದ್ವಾರಕಾಧೀಶ ದೇವಸ್ಥಾನವಿದೆ. 72 ಕಂಬಗಳನ್ನು ಬಳಸಿ, 5 ಅಂತಸ್ತಿನ ಕಟ್ಟವನ್ನು ಕಟ್ಟಲಾಗಿದೆ. ಈ ದೇವಸ್ಥಾನವನ್ನು ದ್ವಾರಕಾಧೀಶ ದೇವಸ್ಥಾನ ಮತ್ತು ಜಗತ್ ದೇವಸ್ಥಾನವೆಂದು ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ಮೊದಲು ಶ್ರೀಕೃಷ್ಣನ ಮೊಮ್ಮಗ ವಜ್ರನಾಭ ನಿರ್ಮಿಸಿದನೆಂದು ಹೇಳಲಾಗುತ್ತದೆ. ಬಳಿಕ ದ್ವಾರಕೆ ಮುಳುಗಿ, ದೇವಸ್ಥಾನವೂ ಮುಳುಗಿ ಮರು ನಿರ್ಮಾಣವಾಯಿತು.
ಚಾರ್ ಧಾಮ್ ಯಾತ್ರೆಯಲ್ಲಿ ದ್ವಾರಕಾ ದೇವಸ್ಥಾನವೂ ಒಂದಾಗಿದೆ. ಶ್ರೀಕೃಷ್ಣನಿಂದಲೇ ನಿರ್ಮಿತವಾಗಿರುವ, ಗೋಮತಿ ನದಿ ದಡದಲ್ಲಿರುವ ದ್ವಾರಕೆ ಶ್ರೀಕೃಷ್ಣನ ರಾಜಧಾನಿ ಎಂದು ಕರೆಯಲಾಗುತ್ತಿತ್ತು. ಅಂದು ಶ್ರೀಕೃಷ್ಣ ಪರಮಾತ್ಮ ಇದ್ದ ದ್ವಾರಕೆ ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಈಗಿರುವ ದ್ವಾರಕೆ ಹೊಸದಾಗಿ ನಿರ್ಮಾಣಗೊಂಡ ನಗರವೆಂದು ಹೇಳಲಾಗಿದೆ. ಇಲ್ಲಿರುವ ಸಮುದ್ರದಲ್ಲಿ ದ್ವಾರಕಾ ನಗರಿಯ ಅವಶೇಷಗಳೂ ಇದೆ.
ದ್ವಾರ ಎಂದರೆ ಬಾಗಿಲು, ದ್ವಾರಕಾ ಎಂದರೆ, ಬಾಗಿಲುಗಳಿರುವ ಪಟ್ಟಣ ಎಂದರ್ಥ. ಈ ಹೆಸರು ಬರಲು ಕಾರಣವೇನೆಂದರೆ, ಶ್ರೀಕೃಷ್ಣ ನಿರ್ಮಿಸಿದ್ದ ದ್ವಾರಕೆಗೆ ಹಲವು ಸುಂದರ ಬಾಗಿಲುಗಳುಗಳಿದ್ದವು. ಹಾಗಾಗಿ ಈ ಪಟ್ಟಣಕ್ಕೆ ದ್ವಾರಕಾ ಎಂಬ ಹೆಸರು ಬಂತು. ಇನ್ನು ಶ್ರೀಕೃಷ್ಣ ದ್ವಾರಕೆಗೆ ಬಂದದ್ದಕ್ಕೂ ಕಾರಣವಿದೆ. ಶ್ರೀಕೃಷ್ಣ ಕಂಸನನ್ನು ಕೊಂದ ಬಳಿಕ, ಅವನನ್ನು ವಿವಾಹವಾಗಿದ್ದ ಜರಾಸಂಧನ ಪುತ್ರಿಯರು ವಿಧವೆಯರಾಗುತ್ತಾರೆ. ಆ ಸಿಟ್ಟಿನಲ್ಲಿ ಜರಾಸಂಧ ಹಲವು ಬಾರಿ ಮಥುರೆಯ ಮೇಲೆ ದಾಳಿ ಮಾಡಿ, ವಿಫಲನಾಗುತ್ತಾನೆ.
ಕೊನೆಗೆ ದೊಡ್ಡ ಸೈನ್ಯದೊಂದಿಗೆ ಮಥುರೆಗೆ ಬಂದು ಶ್ರೀಕೃಷ್ಣನ ಸಂಹಾರ ಮಾಡಬೇಕೆಂದು ನಿರ್ಧರಿಸುತ್ತಾನೆ. ಹಾಗಾಗಿ ಹಲವು ರಾಕ್ಷಸರ ಸಹಾಯವನ್ನೂ ಪಡೆಯುತ್ತಾನೆ. ಇದನ್ನರಿತ ಶ್ರೀಕೃಷ್ಣ, ತನ್ನಿಂದ ಮಥುರೆಯ ಜನರಿಗೆ ಸಾವು ನೋವಾಗಬಾರದು ಎಂದು, ಜನರನ್ನು ಕರೆದುಕೊಂಡು ಹೋಗಿ, ದ್ವಾರಕೆಯ ಸಮುದ್ರ ತಟದಲ್ಲಿ ನೆಲೆನಿಲ್ಲಲು ಚಿಂತಿಸುತ್ತಾನೆ. ಇದಕ್ಕಾಗಿ ಸಮುದ್ರರಾಜನ ಬಳಿ ಸ್ಥಳ ಕೇಳಿ, ವಿಶ್ವಕರ್ಮರಿಂದ ದ್ವಾರಕೆಯನ್ನು ನಿರ್ಮಾಣ ಮಾಡಿಸುತ್ತಾನೆ. ಈ ರೀತಿಯಾಗಿ ದ್ವಾರಕೆ ನಿರ್ಮಾಣವಾಯಿತು. ಕೊನೆಗೆ ಶ್ರೀಕೃಷ್ಣ ಸ್ವರ್ಗಾರೋಹಣ ಮಾಡುತ್ತಿದ್ದಂತೆ, ದ್ವಾರಕೆಯು ಸಮುದ್ರದಲ್ಲಿ ಮುಳುಗಿ ಹೋಯಿತು. ಈಗ ಇರುವ ದ್ವಾರಕಾ ನಗರ ಮತ್ತು ದ್ವಾರಕಾಧೀಶನ ದೇವಸ್ಥಾನವನ್ನು ಶ್ರೀಕೃಷ್ಣನ ಮೊಮ್ಮಗ ನಿರ್ಮಿಸಿದನೆನ್ನಲಾಗಿದೆ.