ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ ಜನರೊಟ್ಟಿಗೆ ಇರಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಗುರು. ನಿಮಗೆ ವಿದ್ಯೆ ಕಲಿಸುವ ಗುರು, ಮೊದಲು ಸರಿಯಾಗಿ ಕಲಿತಿರಬೇಕು. ಅರ್ಧಂಬರ್ದ ಕಲಿತ ಗುರು ನಿಮಗೆ ಪರಿಪೂರ್ಣ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣ ವಿದ್ಯೆ ಕಲಿತ, ಬುದ್ಧಿವಂತ ವ್ಯಕ್ತಿಯನ್ನೇ ನಿಮ್ಮ ಗುರುಗಳಾಗಿ ಸ್ವೀಕರಿಸಿದರೆ ಉತ್ತಮ. ಏನೂ ಗೊತ್ತಿಲ್ಲದಂಥ ಗುರುಗಳಿಂದ ದೂರವಿರುವುದೇ ಉತ್ತಮ ಎನ್ನುತ್ತಾರೆ ವಿದುರ.
ಎರಡನೇಯದಾಗಿ ಶಿಷ್ಯ. ನೀವು ಉತ್ತಮ ಗುರುವಾಗಿದ್ದರೆ, ನಿಮ್ಮ ಶಿಷ್ಯನಿಗೆ ಸರಿಯಾದ ವಿಧಾನದಲ್ಲಿ ವಿದ್ಯೆ ನೀಡಲು ಗೊತ್ತಿದ್ದರೆ, ನಿಮಗೆ ತಕ್ಕ ಶಿಷ್ಯನನ್ನೇ ಆಯ್ದುಕೊಳ್ಳಿ. ಯಾಕಂದ್ರೆ ಓರ್ವ ಶಿಷ್ಯನ ಗುಣ ಎಂಥದ್ದು ಎಂದು ಕೆಲ ದಿನಗಳಲ್ಲೇ ಓರ್ವ ಗುರು ಕಂಡು ಹಿಡಿಯಬಹುದು. ಹಾಗಾಗಿ ನೀವು ಕಲಿಸಿದ್ದನ್ನ ಕಲಿಯುವ ಗುಣವಿರುವ ಶಿಷ್ಯನಾಗಿದ್ದಲ್ಲಿ ಮಾತ್ರ, ಅಂಥ ವ್ಯಕ್ತಿಯನ್ನೇ ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ. ಕಲಿಯಲು ಅಸಾಧ್ಯವಾದ ವ್ಯಕ್ತಿಗೆ ಎಷ್ಟು ಕಲಿಸಿದರೂ, ನಿಮ್ಮ ಸಮಯವನ್ನು ನೀವೇ ವ್ಯರ್ಥ ಮಾಡಿಕೊಂಡ ಹಾಗೆ.
ಮೂರನೇಯದಾಗಿ ಪತ್ನಿ. ಪತ್ನಿ ಅಂದರೆ, ಆಕೆ ಪತಿಗಷ್ಟೇ ಪತ್ನಿಯಲ್ಲ. ಬದಲಾಗಿ ಒಂದು ಮನೆಯ ಸೊಸೆ, ಮಕ್ಕಳ ತಾಯಿಯಾಗಿ ಇರ್ತಾಳೆ. ಹಾಗಾಗೆ ಆಕೆಯ ನುಡಿ ಜೇನಿನಂತಿರಬೇಕು. ತಾಳ್ಮೆ ಇದ್ದಲ್ಲಿ ಮಾತ್ರ ಆ ಜೇನಿನಂಥ ನುಡಿ ಬರಲು ಸಾಧ್ಯ. ಇಲ್ಲವಾದಲ್ಲಿ ಅಂಥ ಮನೆಯಲ್ಲಿ ಪ್ರತಿದಿನ ಜಗಳವೇ ನಡೆಯುತ್ತದೆ. ಹಾಗಾಗಿ ಮದುವೆಗೂ ಮುನ್ನ ಆ ಹೆಣ್ಣಿನ ಗುಣ ಹೇಗಿದೆ..? ಆಕೆ ಚೆಂದವಾಗಿ ಮಾತನಾಡುತ್ತಾಳಾ, ಇಲ್ಲಾ ಸಿಡುಕುತ್ತಾಳಾ ಅನ್ನೋ ಬಗ್ಗೆ ಮೊದಲೇ ತಿಳಿದುಕೊಂಡಿರಿ.
ನಾಲ್ಕನೇಯದಾಗಿ ರಾಜ. ಯಾವ ರಾಜ ತನ್ನ ಪ್ರಜೆಗಳ ರಕ್ಷಣೆ ಮಾಡಲು ಲಾಯಕ್ಕಿರುವುದಿಲ್ಲವೋ, ಅಂಥ ರಾಜನನ್ನು ಮೊದಲು ಪಟ್ಟದಿಂದ ಕೆಳಗಿಳಿಸಿ ಎನ್ನುತ್ತಾರೆ ವಿದುರ. ಯಾಕಂದ್ರೆ ಅಂಥ ರಾಜರಿರುವುದರಿಂದ ಪ್ರಜೆಗಳು ಎಂದಿಗೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮನ್ನು ರಕ್ಷಿಸಲು ಯೋಗ್ಯನಿರುವ ರಾಜನನ್ನೇ ನೀವು ಆಯ್ಕೆ ಮಾಡಬೇಕು ಅನ್ನೋದು ವಿದುರರ ನುಡಿ.