Mollywood News: ಸಿನಿಮಾ ಅಂದರೆ ಅದೊಂದು ಅದಮ್ಯ ಉತ್ಸಾಹ. ಹುಮ್ಮಸ್ಸು. ಇದೆಲ್ಲವೂ ನಿಜ. ಸಿನಿಮಾ ವೇರಿಗುಡ್ ಬ್ಯುಸಿನೆಸ್ . ಬಟ್ ಅದನ್ನು ತುಂಬಾ ಜಾಣ್ಮೆಯಿಂದ ಮಾಡಬೇಕಷ್ಟೆ. ಬೇಜವಾಬ್ದಾರಿ, ಅಶಿಸ್ತು, ಅಹಂಕಾರ ಸಿನಿಮಾಗೆ ಆಗಿಬರೋದಿಲ್ಲ. ಆದರೆ, ಯಾವುದೇ ಸಿನಿಮಾರಂಗ ಇರಲಿ, ಅಲ್ಲಿ ನೂರಾರು ಕೋಟಿ ವ್ಯಾಪಾರ ವಹಿವಾಟು ಆಗುತ್ತೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ವ್ಯವಹಾರ ಕಾಮನ್. ಹಾಗೆ ನೋಡಿದರೆ, ಸಿನಿಮಾರಂಗದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಶೇ.10 ರಷ್ಟು ಲಾಭ ನೋಡುವ ಚಿತ್ರರಂಗ ಶೇ.90 ರಷ್ಟು ನಷ್ಟವನ್ನೂ ನೋಡುತ್ತೆ. ನೂರಾರು ಸಿನಿಮಾಗಳು ಬಿಡುಗಡೆಯಾದರೂ, ಅಲ್ಲಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಹಾಕಿದ ಬಂಡವಾಳ ಹಿಂಪಡೆಯುವುದಲ್ಲಿ ತಿಣುಕಾಡುತ್ತವೆ. ಎಲ್ಲೋ ಒಂದೆರೆಡು ಸಿನಿಮಾಗಳು ಯಶಸ್ಸು ಕಾಣುತ್ತವೆ. ಚಿತ್ರರಂಗದ ಮೇಲೆ ನಿರೀಕ್ಷೆ ಇಟ್ಟುಕೊಳ್ಳೋದು ಕಷ್ಟ. ಯಾಕೆಂದರೆ ನಿರೀಕ್ಷೆಯ ಸಿನಿಮಾಗಳೇ ಮಕಾಡೆ ಮಲಗಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
ಈಗ ಇಲ್ಲಿ ಹೇಳ ಹೊರಟಿರುವ ವಿಷಯ, ಮಲಯಾಳಂ ಚಿತ್ರರಂಗ ಕೇವಲ ಒಂದೇ ಒಂದು ತಿಂಗಳಲ್ಲಿ 52 ಕೋಟಿ ರೂ.ನಷ್ಟ ಅನುಭವಿಸಿದೆ. ಇದು ನಿಜಕ್ಕೂ ಅಚ್ಚರಿ ಎನಿಸಬಹುದು. ಕೆಲವರಿಗೆ ಅದರಲ್ಲೇನು ವಿಶೇಷ ಅನಿಸಲೂ ಬಹುದು. ಮಲಯಾಳಂ ಚಿತ್ರರಂಗ ಒಳ್ಳೆಯ ಕಥೆಗಳ ಮೂಲಕ ಅದ್ಭುತ ಸಿನಿಮಾಗಳನ್ನು ನೀಡಿದೆ. ಆ ಮೂಲಕ ದೇಶದ ಅತ್ಯುತ್ತಮ ಚಿತ್ರರಂಗ ಅನ್ನುವ ಹೆಸರೂ ಪಡೆದಿದೆ. ಆದರೆ, ಫೆಬ್ರವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಬರೋಬ್ಬರಿ 52 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಅಂದರೆ ನೀವು ನಂಬಲೇಬೇಕು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, 1.60 ಕೋಟಿ ಹಣ ಹಾಕಿ ಮಾಡಿದ ಸಿನಿಮಾ ಕೇವಲ 10 ಸಾವಿರ ರೂಪಾಯಿ ಗಳಿಸಿದೆ. ಕನ್ನಡ ಸಿನಿಮಾರಂಗದಲ್ಲಿ ಇದಕ್ಕಿಂತಲೂ ಕಡಿಮೆ ಗಳಿಕೆ ಕಂಡ ಉದಾಹರಣೆಯ ಸಿನಿಮಾಗಳು ಸಾಕಷ್ಟು ಇವೆ.
ಕೋವಿಡ್ ನಂತರ ಮಲಯಾಳಂ ಚಿತ್ರರಂಗ ದೇಶದ ನಂಬರ್ 1 ಚಿತ್ರರಂಗ ಎನಿಸಿಕೊಂಡಿದ್ದು ಸುಳ್ಳಲ್ಲ. ಕಾರಣ, ಒಳ್ಳೊಳ್ಳೆಯ ಕಥಾಹಂದರ ಇರುವ ಸಿನಿಮಾಗಳು ಬಂದಿವೆ. ಮಲಯಾಳಂ ಚಿತ್ರರಂಗದಿಂದ ಹೊರಬರುತ್ತಿರುವ ಸಿನಿಮಾಗಳನ್ನು ಇಡೀ ದೇಶದ ಜನ ಒಪ್ಪಿ, ಅಪ್ಪಿದ್ದು ಸುಳ್ಳಲ್ಲ. ಕೋವಿಡ್ ವೇಳೆ ಒಟಿಟಿಗಳಲ್ಲಿ ಮಲಯಾಳಂ ಸಿನಿಮಾಗಳು ನಿಜಕ್ಕೂ ದೊಡ್ಡ ಸದ್ದು ಮಾಡಿದ್ದವು. ಈಗಲೂ ಸಹ ಹಲವು ಮಲಯಾಳಂ ಸಿನಿಮಾಗಳನ್ನು ದೇಶದ ಸಿನಿಮಾ ಮಂದಿ ಎದುರುನೋಡುತ್ತಲೇ ಇದ್ದಾರೆ. ಬರುವ ಪ್ರತಿಯೊಂದು ಮಲಯಾಳಂ ಸಿನಿಮಾ ಕೂಡ, ಅದ್ಭುತ ಎನಿಸುತ್ತೆ. ಆದರೂ ಸಹ ಮಲಯಾಳಂ ಚಿತ್ರರಂಗ ಪ್ರತಿ ತಿಂಗಳು ನಷ್ಟ ಅನುಭವಿಸುತ್ತಿದೆ. ಕಳೆದ ತಿಂಗಳಲ್ಲಿ 52 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಅನ್ನೋದು ಈ ಹೊತ್ತಿನ ಸುದ್ದಿ.
ಮಲಯಾಳಂ ಸಿನಿಮಾ ನಿರ್ಮಾಪಕರ ಅಸೋಸಿಯೇಷನ್ (ಕೆಎಫ್ಪಿಎ) ಪ್ರತಿ ತಿಂಗಳು ವರದಿ ಬಿಡುಗಡೆ ಮಾಡುತ್ತೆ. ಫೆಬ್ರವರಿ ತಿಂಗಳ ವರದಿ ಇತ್ತೀಚೆಗೆ ಬಂದಿದೆ. ವರದಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ 52 ಕೋಟಿ ರೂಪಾಯಿ ಹಣ ನಷ್ಟ ಅನುಭವಿಸಿದೆ. ಇತರೆ ಕೆಲ ಚಿತ್ರರಂಗಗಳಿಗೆ ಹೋಲಿಸಿದರೆ ಇದು ಕಡಿಮೆ ಮೊತ್ತವಾದರೂ 52 ಕೋಟಿ ಮೊತ್ತ ಚಿಕ್ಕದೇನೂ ಅಲ್ಲ. ಮಲಯಾಳಂ ಚಿತ್ರರಂಗಕ್ಕೆ ಇದು ದೊಡ್ಡ ಮೊತ್ತವೇ.
ನಿರ್ಮಾಪಕರು ಬಿಡುಗಡೆ ಮಾಡಿರುವ ವರದಿಯಂತೆ ಫೆಬ್ರವರಿ ತಿಂಗಳಲ್ಲಿ ಒಟ್ಟು 17 ಮಲಯಾಳಂ ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ ಗೆದ್ದ ಸಿನಿಮಾ ಕೇವಲ ಒಂದೇ ಒಂದು. 17 ಸಿನಿಮಾಗಳ ಪೈಕಿ ಒಂದು ಚಿತ್ರ ಮಾತ್ರ ಕೇವಲ 10 ಸಾವಿರ ರೂಪಾಯಿ ಗಳಿಸಿದೆಯಂತೆ. ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆದ 17 ಸಿನಿಮಾಗಳ ಒಟ್ಟು ಬಜೆಟ್ 75.23 ಕೋಟಿ ರೂಪಾಯಿ. ಚಿತ್ರಮಂದಿರದಿಂದ ಕಲೆಕ್ಷನ್ ಆದ ಮೊತ್ತ ಕೇವಲ 23.55 ಕೋಟಿ ರೂಪಾಯಿಗಳು. 1.60 ಕೋಟಿ ಬಜೆಟ್ ಹಾಕಿ ಮಾಡಲಾಗಿದ್ದ ‘ಲವೆಬಲ್’ ಮಲಯಾಳಂ ಸಿನಿಮಾ ಗಳಿಸಿರುವುದು ಕೇವಲ 10 ಸಾವಿರ ರೂಪಾಯಿ. ‘ಆಫೀಸರ್ ಆನ್ ಡ್ಯೂಟಿ’ ಸಿನಿಮಾ ಗೆಲುವು ಕಂಡಿದೆ. ಅದು ಚಿತ್ರಮಂದಿರಗಳಿಂದ ಗಳಿಸಿರುವುದು 13 ಕೋಟಿ.
ಇನ್ನೊಂದು ವಿಷಯ ಇಲ್ಲಿ ಗಮನಿಸಲೇಬೇಕು. ಜನವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗಕ್ಕೆ ಬರೋಬ್ಬರಿ 110 ಕೋಟಿ ನಷ್ಟವಾಗಿತ್ತು. ಜನವರಿ ತಿಂಗಳಲ್ಲಿ 28 ಸಿನಿಮಾಗಳು ಬಿಡುಗಡೆ ಆಗಿದ್ದವು. ಅವುಗಳಲ್ಲಿ ಗೆದ್ದಿದ್ದು ಕೇವಲ ಎರಡು ಸಿನಿಮಾಗಳು, ಹಾಗಾಗಿ ಜನವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ 110 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಅಂದಹಾಗೆ ನಿರ್ಮಾಪಕರು ಬಿಡುಗಡೆ ಮಾಡುತ್ತಿರುವ ಪಟ್ಟಿಯಲ್ಲಿ ಕೇವಲ ಚಿತ್ರಮಂದಿರದಿಂದ ಬರುವ ಕಲೆಕ್ಷನ್ ಅನ್ನು ಮಾತ್ರವೇ ಲೆಕ್ಕ ಹಾಕಲಾಗಿದೆ. ಒಟಿಟಿ, ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್ಗಳ ಲೆಕ್ಕಾಚಾರ ಇಲ್ಲ.
ಇದೇ ಕಾರಣಕ್ಕೆ ನಿರ್ಮಾಪಕರು ಮತ್ತು ಪ್ರದರ್ಶಕರು ಪ್ರತಿಭಟನೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಸಂಪೂರ್ಣ ಚಿತ್ರರಂಗ ಬಂದ್ ಗೆ ಈಗಾಗಲೇ ಕರೆ ನೀಡಲಾಗಿದೆ. ಸಿನಿಮಾ ಟಿಕೆಟ್ಗಳ ಮೇಲೆ ತೆರಿಗೆ ಏರಿಕೆಗೆ ವಿರೋಧ, ನಿರ್ಮಾಣ ವೆಚ್ಚ ಹೆಚ್ಚಳ, ನಟರ ಸಂಭಾವನೆ ಇಳಿಕೆ ಇನ್ನಿತರೆ ವಿಷಯಗಳನ್ನು ಇರಿಸಿಕೊಂಡು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇದು ಮಲಯಾಳಂ ಚಿತ್ರರಂಗದ ಸುದ್ದಿ. ಕನ್ನಡ ಸಿನಿರಂಗ ಕೂಡ ಇದಕ್ಕೆ ಹೊರತಲ್ಲ. ಈಗ ಮೂರು ತಿಂಗಳು ಕಳೆದಿದೆ. ಹೇಳಿಕೊಳ್ಳೋಕೆ ಒಂದೇ ಒಂದು ಸಿನಿಮಾ ಕೂಡ ಹಿಟ್ ಎನಿಸಿಕೊಂಡಿಲ್ಲ. ಇಲ್ಲೂ ಲೆಕ್ಕ ಹಾಕಿದರೆ ಕೋಟಿಗಟ್ಟಲೇ ನಷ್ಟ ಅನುಭವಿಸಿದೆ. ನಿರ್ಮಾಪಕರ ಗೋಳು ಕೂಡ ಹೇಳತೀರದ್ದು. ಇಲ್ಲೂ ಲೆಕ್ಕಾಚಾರ ಹಾಕಿ ನೋಡಿದರೆ, ಪ್ರತಿ ವರ್ಷ ವಹಿವಾಟು ಆಗುವ ನೂರಾರು ಕೋಟಿ ನಿಜಕ್ಕೂ ಹಿಂದಿರುಗಿದೆಯಾ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಇದೆ.